ಮಂಗಳೂರಿನಲ್ಲಿ ‘ಆಪರೇಶನ್ ಸಿಂದೂರ’ ಯೋಧರಿಗೆ ಧೈರ್ಯ ತುಂಬಲು ಸರ್ವಧರ್ಮ ಪ್ರಾರ್ಥನೆ
ಕನ್ನಡಪ್ರಭ ವಾರ್ತೆ ಮಂಗಳೂರುಭಯೋತ್ಪಾದಕರ ವಿರುದ್ಧ ‘ಆಪರೇಶನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೈನಿಕರಿಗೆ ಧೈರ್ಯ ತುಂಬುವ ಹಾಗೂ ಪಹಲ್ಗಾಮ್‌ನಲ್ಲಿ ಹುತಾತ್ಮ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸರ್ವ ಧರ್ಮ ಪ್ರಾರ್ಥನಾ ಸಭೆಯು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ನಗರದ ಪುರಭವನದ ಮುಂಭಾಗದ ರಾಜಾಜಿ ಪಾರ್ಕ್‌ನಲ್ಲಿ ಶನಿವಾರ ನಡೆಯಿತು.
ವಿವಿಧ ಧರ್ಮಗಳ ಧರ್ಮಗುರುಗಳು, ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.ಕಟೀಲಿನ ಅನಂತ ಪದ್ಮನಾಭ ಆಸ್ರಣ್ಣ ಮಾತನಾಡಿ, ಭಾರತ ಮಾತೆಯ ಮಕ್ಕಳಾಗಿ ಭಾರತ ಮಾತೆಗೆ ಸೋಲಾಗುವುದನ್ನು ಸಹಿಸಲಾಗದು. ಜಾತಿ, ಧರ್ಮ ಯಾವುದೇ ಇದ್ದರೂ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬಂತೆ ಒಗ್ಗೂಡಿದ್ದೇವೆ. ಭಾರತ ಮಾತೆಗೆ ಅನ್ಯಾಯವಾದಾಗ ನಾವೆಲ್ಲ ಒಂದು ಎಂಬುದನ್ನು ತೋರಿಸಿಕೊಡುವ ದೇಶ ನಮ್ಮದು. ಈಗಲೂ ಎಲ್ಲ ವೈರುಧ್ಯಗಳನ್ನು ಮೀರಿ ನಿಂತು ಇಡೀ ದೇಶ ಒಗ್ಗಟ್ಟಿನ ಸಂದೇಶ ಸಾರುತ್ತಿದೆ ಎಂದು ಹೇಳಿದರು.
ಧರ್ಮಗುರು ಅಬ್ದುಲ್ ಅಜೀಜ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ಭಾರತ ಎಂದರೆ ಬೆಳಕು, ಯಾರಿಂದಲೂ ಅದನ್ನು ಆರಿಸಲು ಸಾಧ್ಯವಿಲ್ಲ. ಭಾರತ ಎಂದರೆ ಶಕ್ತಿ, ಯಾರಿಂದಲೂ ದುರ್ಬಲಗೊಳಿಸಲಾಗದು. ನಾವು ಭಾರತೀಯರು ಎಂಬ ಒಂದೇ ವಾಕ್ಯದಡಿ ಇಂಥ ಸಂದಿಗ್ಧ ಸಂದರ್ಭದಲ್ಲಿ ಒಗ್ಗೂಡಿದ್ದೇವೆ. ಇದು ದೇಶದ ಐಕ್ಯತೆಯ ಸಂಕೇತವಾಗಿದೆ. ಉಗ್ರವಾದ ಮೆಟ್ಟಿ ನಿಲ್ಲಲು ಭಾರತೀಯರೆಲ್ಲರೂ ಒಗ್ಗಟ್ಟಾಗಿದ್ದೇವೆ. ದೇಶದ ಏಕತೆ, ಅಖಂಡತೆ ಧ್ವಂಸ ಮಾಡಲು ಯಾವ ಶಕ್ತಿಗೂ ಅಸಾಧ್ಯ ಎಂದರು.ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೊ ಮಾತನಾಡಿ, ಮನುಷ್ಯತ್ವ ಮರೆತು ಭಯೋತ್ಪಾದಕರು ಮೃಗಗಳಂತೆ ವರ್ತಿಸಿದ್ದನ್ನು ಎಲ್ಲರೂ ಬಲವಾಗಿ ಖಂಡಿಸಬೇಕು. ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಎಲ್ಲರೂ ಭಾರತ ಸರ್ಕಾರಕ್ಕೆ ಬೆಂಬಲ ನೀಡೋಣ ಎಂದು ಹೇಳಿದರು.
ಎಂಎಲ್ಸಿ ಐವನ್ ಡಿಸೋಜ ಮಾತನಾಡಿ, ನಮ್ಮ ದೇಶದ ಅಮಾಯಕರ ಮೇಲೆ ದಾಳಿ ನಡೆದರೆ ಯಾವ ಕಾರಣಕ್ಕೂ ಸಹಿಸಲಾಗದು. ಅಮಾಯಕರ ಕೊಂದವರ ಮೇಲೆ ಪ್ರತೀಕಾರ ಆಗಲೇಬೇಕಿದೆ. ದೇಶದ ಏಕತೆ ಮತ್ತು ಅಖಂಡತೆಗಾಗಿ ಒಗ್ಗಟ್ಟಾಗಿದ್ದೇವೆ ಎಂದರು.ಹಿರಿಯ ವೈದ್ಯ ಡಾ.ಶಾಂತಾರಾಮ್, ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಸ್ಟ್ಯಾನಿ ಆಲ್ವಾರಿಸ್, ಸೈಂಟ್ ಅಲೋಶಿಯಸ್ ಉಪಕುಲಪತಿ ಫಾ.ಪ್ರವೀಣ್ ಮಾರ್ಟಿಸ್ ಮತ್ತಿತರರು ಇದ್ದರು.