ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ, ಆಕರ್ಷಕ ಪಥಸಂಚಲನ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ನಗರಸಭೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 78 ವರ್ಷವಾಯಿತು. ಭವ್ಯ ಪರಂಪರೆ ಹೊಂದಿರುವ ಭಾರತ ದೇಶ ಹತ್ತಾರು ಕಾರಣಗಳಿಂದಾಗಿ ಬ್ರಿಟಿಷರ ಆಡಳಿತಕ್ಕೆ ಒಳಗಾಗಿತ್ತು. ಇದರ ಪರಿಣಾಮವಾಗಿ ಈ ನಾಡಿನ ಜನ ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ್ದಾರೆ. ಈಗ ಅದೊಂದು ಚರಿತ್ರೆಯ ಭಾಗವಾಗಿದೆ. ಭಾರತ ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಸುದೀರ್ಘ ಹೋರಾಟವನ್ನೇ ಭಾರತೀಯರು ಮಾಡಿದ್ದರು. ಅಂತಿಮವಾಗಿ 1947ರ ಆಗಸ್ಟ್ 15ರಂದು ದೇಶ ಸ್ವತಂತ್ರವಾಯಿತು. ಆದರೆ ಹೈದರಾಬಾದ್ ನಿಜಾಮರ ಆಡಳಿತಕ್ಕೊಳಪಟ್ಟಿದ್ದ ವಿಜಯನಗರ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಪ್ರದೇಶಗಳು ಸ್ವತಂತ್ರವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು. ಸ್ವತಂತ್ರ ರಾಷ್ಟ್ರ ಕಟ್ಟುವ ಬಯಕೆಯಿಂದ ಹೈದರಾಬಾದ್ ನಿಜಾಮರು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಂಡಿರಲಿಲ್ಲ. ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ್ದರು. ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದರಾಬಾದ್ ಸಂಸ್ಥಾನದ ಪ್ರಜೆಗಳು ಮತ್ತು ಸ್ವಾಮಿ ರಮಾನಂದ ತೀರ್ಥರು ಸೇರಿದಂತೆ ಅನೇಕರು ಅಹಿಂಸಾತ್ಮಕ ಚಳವಳಿ ಪ್ರಾರಂಭಿಸಿದರು ಎಂದರು.
ಬ್ರಿಟಿಷರ ಕುಮ್ಮಕ್ಕುನಿಂದ ಹೈದರಾಬಾದ್ ಪ್ರಾಂತ್ಯವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರ ವಿರುದ್ಧ ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರು, 1948ರ ಸೆಪ್ಟೆಂಬರ್ 13ರಂದು ದಿಟ್ಟತನದಿಂದ ಭಾರತದ ಸೇನೆಯ ಮುಖಂಡ ಜನರಲ್ ಚೌಧರಿ ನೇತೃತ್ವದಲ್ಲಿ ಪೊಲೀಸ್ ಕಾರ್ಯಾಚರಣೆ ಕೈಗೊಂಡು ಹಿನ್ನೆಲೆಯಲ್ಲಿ ಹೈದರಾಬಾದ್ ನಿಜಾಮರು ಶರಣಾಗಿ ಭಾರತದ ಒಕ್ಕೂಟ ವ್ಯವಸ್ಥೆಯ ಸೇರ್ಪಡೆಗೆ ಒಪ್ಪಿಕೊಂಡರು ಎಂದರು.ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ ಪವಿತ್ರ ಭೂಮಿ 1948 ಸೆಪ್ಟೆಂಬರ್ 17ರಂದು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು. ಅಂದಿನ ಸರ್ಕಾರ 2013 ನವೆಂಬರ್ 6ರಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಿತು ಎಂದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಭಾರತದ ಸಂವಿಧಾನ 98ನೇ ವಿಧಿಯ ತಿದ್ದುಪಡಿ ಕಾಯಿದೆ ಅನುಚ್ಛೇದ 371(ಜೆ) ಮೂಲಕ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳ ಅಭಿವೃದ್ಧಿಗಾಗಿ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ನೀಡಲಾಗಿದೆ. ರೈತರುಯಾವುದೇ ಕಾರಣಕ್ಕೂ ಕೃಷಿ ಭೂಮಿ ಮಾರಾಟ ಮಾಡಬಾರದು ಎಂದರು.ಹೂವಿನಹಡಗಲಿ ಬಾಲಕಿಯರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಗುರುಬಸವರಾಜ್ ಕಲ್ಯಾಣ ಕರ್ನಾಟಕ ವಿಮೋಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ಶಿವಮೂರ್ತಿ, ಜಿಪಂ ಸಿಇಒ ಮೊಹಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ. ವಿವೇಕಾನಂದ, ತಹಸೀಲ್ದಾರ್ ಎಂ. ಶ್ರುತಿ ಭಾಗವಹಿಸಿದ್ದರು.
ಧ್ವಜಾರೋಹಣ ಬಳಿಕ ಜಿಲ್ಲಾಧಿಕಾರಿ ಧ್ವಜವಂದನೆ ಸ್ವೀಕರಿಸಿದರು. ಪೊಲೀಸ್ ಇಲಾಖೆ, ಗೃಹ ರಕ್ಷಕದಳ, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಸೇವಾದಳದ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಎಸ್‌ಜಿಆರ್‌ಎಸ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.