ಸವಣೂರು: ನಾವೆಲ್ಲರೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಜನರ ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳಿಗೆ ಸಮನಾಗಿ ಆದ್ಯತೆ ನೀಡಿ ಜನಕಲ್ಯಾಣಕ್ಕೆ ಶ್ರಮೀಸೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆನೀಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 100 ಹಾಸಿಗೆ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹರ್ ಘರ್ ನಲ್ ಜಲ್ ಹಾಗೂ ಜಲಧಾರೆ ಯೋಜನೆಗಳ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ನೀರು, ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪ್ರಶಂಸಿಸಿದರು.
ಯಾವುದೇ ಪಕ್ಷದ ಶಾಸಕರಾದರೂ ಕ್ಷೇತ್ರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. 2047ರೊಳಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿಸುವ ಗುರಿ ಹೊಂದಿದ್ದು, ಯುವಶಕ್ತಿ, ಡಿಜಿಟಲ್ ಕ್ರಾಂತಿ ಹಾಗೂ ಕೌಶಲ್ಯಾಭಿವೃದ್ಧಿ ಮುಖ್ಯ. ಮನೆ ನಿರ್ಮಾಣ, ಶಿಕ್ಷಣ, ಆರೋಗ್ಯ ಹಾಗೂ ವಿದ್ಯುತ್ ಕ್ಷೇತ್ರಗಳಲ್ಲಿ ದೇಶ ಮುನ್ನಡೆ ಸಾಧಿಸುತ್ತಿದೆ ಎಂದರು.ಶಂಕುಸ್ಥಾಪನೆ ನೆರವೇರಿಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ. ಜನರು ಕಟ್ಟಿದ ತೆರಿಗೆ ಹಣದಲ್ಲಿ ಸರ್ಕಾರಗಳು ಕೈಗೊಳ್ಳುವ ಅಭಿವೃದ್ಧಿಯಲ್ಲಿ ತಾರತಮ್ಯ ಇರಬಾರದು. ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಇದಕ್ಕೆ ಕಾಂಗ್ರೆಸ್ ಸರ್ಕಾರದ ಕಲ್ಯಾಣ ಯೋಜನೆಗಳು ಉತ್ತಮ ಉದಾಹರಣೆಯಾಗಿವೆ. ಅಭಿವೃದ್ಧಿಗೆ ಆರೋಗ್ಯ ಹಾಗೂ ಶಿಕ್ಷಣ ಮುಖ್ಯ ಮಾನದಂಡವಾಗಿವೆ. ಕೇಂದ್ರ ಸರ್ಕಾರಕ್ಕೆ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.ಶಿಗ್ಗಾಂವಿಗೆ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ 250 ಹಾಸಿಗೆ ಆಸ್ಪತ್ರೆಯ ಸಂಪೂರ್ಣ ಕಾಮಗಾರಿಯನ್ನು ಕೈಗೊಂಡು ಇಂದು ಉದ್ಘಾಟಿಸಿದ್ದೇವೆ. ಸವಣೂರಿಗೆ ಸಹ ಬೊಮ್ಮಾಯಿ ಅವರು ದೊಡ್ಡ ಆಯುರ್ವೇದ ಕಾಲೇಜ್ ನೀಡಿದ್ದಾರೆ. ಕಾಲೇಜು ಉದ್ಘಾಟಿಸಿ ಹಂತ ಹಂತವಾಗಿ ಸಿಬ್ಬಂದಿಯನ್ನು ನೀಡಲು ಯೋಜನೆ ರೂಪಿಸಲಾಗುವುದು ಎಂದರು.ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಮಾತನಾಡಿ, ಸವಣೂರಿಗೆ ಈಗ 20 ದಿನಕ್ಕೆ ಒಮ್ಮೆ ನೀರು ಬರುತ್ತಿದೆ. ಮುಂದಿನ ವರ್ಷ ನಿತ್ಯ ನೀರು ಸರಬರಾಜು ಕೈಗೊಳ್ಳಲು ಈಗಾಗಲೇ 350 ಕೋಟಿ ಅನುದಾನದಲ್ಲಿ ಕೆಲಸ ಆರಂಭಿಸಲಾಗುತ್ತಿದೆ. ನಾನು ಶಾಸಕನಾದ ಮೇಲೆ ಸರ್ಕಾರ ₹1300 ಕೋಟಿ ಅನುದಾನ ನೀಡಿರುವ ಆದೇಶ ಪತ್ರವನ್ನು ತಂದಿದ್ದೇನೆ. ಕಾರಣ, ನಾವು ಕೈಗೊಳ್ಳುವ ಅಭಿವೃದ್ಧಿ ಕೆಲಸವನ್ನು ಬಿಜೆಪಿ ಅವರು ನಮ್ಮ ಸರ್ಕಾರ ನೀಡಿದ ಅನುದಾನದಲ್ಲಿ ಮಾಡುತ್ತಿರುವುದು ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಕ್ಷೇತ್ರದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸಚಿವರಾದ ಜೋಶಿ ಅವರು ₹4 ಕೋಟಿ ಅನುದಾನವನ್ನು ಖಾಸಗಿ ಕಂಪನಿಗಳಿಂದ ಸಹಾಯಧನ ಕೊಡಿಸಿದ್ದಾರೆ. ₹20 ಕೋಟಿ ಕೊಡಿಸುವ ಶಕ್ತಿ ನಿಮಗೆ ಇದೆ ದಯವಿಟ್ಟು ಕೊಡಿಸಿ ಎಂದು ಮನವಿ ಮಾಡಿದರು.ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಾಲ್, ಎಸ್‌ಪಿ ಯಶೋದಾ ವಂಟಗೋಡಿ, ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಬಿ.ಎಸ್. ಶಿಡೇನೂರ, ಟಿಎಚ್‌ಒ ಡಾ. ಚಂದ್ರಕಲಾ ಜೆ., ಡಾ. ಶಂಕರಗೌಡ ಹಿರೇಗೌಡ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಪ್ರಮುಖರಾದ ಭರತ್ ಬೊಮ್ಮಾಯಿ, ಸಂಜೀವಕುಮಾರ ನೀರಲಗಿ, ನಾಗಪ್ಪ ತಿಪ್ಪಕ್ಕನವರ, ರಾಘವೇಂದ್ರ ಬಾಲೇಹೊಸೂರ, ಲಕ್ಷ್ಮಣ ಕನವಳ್ಳಿ, ಸಚಿನ ಪೂಜಾರ, ಮಹೇಶ ಅಪ್ಪಣ್ಣನವರ, ಪುಟ್ಟೇಶ ಕಳ್ಳಿಮನಿ, ಪಾಂಡಪ್ಪ ತಿಪ್ಪಕ್ಕನವರ, ರಮೇಶ ದುಗ್ಗತ್ತಿ ಹಾಗೂ ಇತರರು ಪಾಲ್ಗೊಂಡಿದ್ದರು.