ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಹಿಂದೂ ಸಮಾಜವನ್ನು ವಿಸ್ತರಿಸುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಸರ್ಕಾರವೇ ನೀಡಿದ ಮತಾಂತರದ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳೋಣ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಅವರು ಉಜಿರೆಯಲ್ಲಿ ಶನಿವಾರ ನಡೆದ ಶ್ರೀರಾಮೋತ್ಸವದಲ್ಲಿ ಮಾತನಾಡಿದರು.ಧರ್ಮಕ್ಕೆ ಆಘಾತವಾದಾಗ ಸುಮ್ಮನೆ ಕುಳಿತುಕೊಳ್ಳುವವರು ಧರ್ಮದ್ರೋಹಿಗಳು. ದುಷ್ಟ ಶಕ್ತಿಗಳ ನಾಶಕ್ಕೆ ಹನುಮಂತನಂತೆ ಬಲವಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ. ಸನಾತನ ಧರ್ಮವೆಂಬುದು ಕೇವಲ ಪ್ರಾಚೀನವಾದಷ್ಟೇ ಅಲ್ಲ, ಜಗತ್ತಿನ ಹಳೆಯ, ಇಂದಿನ ವರೆಗೆ ಜೀವಂತವಿರುವ ಏಕೈಕ ಧರ್ಮವಾಗಿದೆ. ಹೀಗಾಗಿ ಹಿಂದು ಧರ್ಮದ ತಂಟೆಗೆ ಬಂದರೆ ಅದಕ್ಕೆ ಸದಾ ಉತ್ತರಿಸಲು ಸಿದ್ಧವಾಗಬೇಕಾಗಿದೆ ಎಂದರು.ಬಿಂದು ಬಿಂದು ಸೇರಿ ಒಂದಾಗುವಂತೆ ಹಿಂದುಗಳು ಒಟ್ಟಾಗಿ ಎದುರಿಸುವ ಕಾಲಬಂದಿದೆ. ಬಂಗಾಲದ ಗೋಪಾಲ ಮುಖರ್ಜಿಯ ಆದರ್ಶ ಅನುಸರಿಸುವ ಸಂದರ್ಭ ಬಂದಿದೆ ಎಂದು ಹೇಳಿದರು.ಗಂಗೆ, ಸರಯೂ ಸ್ವಚ್ಛವಾದಾಗ ಕಾಶಿ ವಿಶ್ವನಾಥನ, ಅಯೋಧ್ಯೆ ರಾಮನ ಮಂದಿರ ಎದ್ದು ನಿಂತಿತು. ಅದೇ ರೀತಿ ಯಮುನೆ ಸ್ಛಚ್ಛವಾಗುವ ಕಾಲ ಬಂದಿದೆ. ಕೃಷ್ಣನ ಭವ್ಯವಾದ ಮಂದಿರ ನೋಡುವ ಭಾಗ್ಯ ಬರಲಿದೆ ಎಂದು ಆಶಿಸಿದರು.ಹಿಂದು ಸಂಖ್ಯೆ ಕಡಿಮೆಯಾದಂತೆ ದೇಶದ ಮೂಲ ಸತ್ವ ಕಡಿಮೆಯಾಗುತ್ತದೆ. ಹೀಗಾಗಿ ಹಿಂದೂ ಸಂಖ್ಯೆಯನ್ನು, ಹಿಂದೂ ಸಮಾಜವನ್ನು ವಿಸ್ತಾರಗೊಳಿಸಲು ಸರ್ಕಾರ ನೀಡಿರುವ ಮತಾಂತರವೆಂಬ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಳ್ಳೋಣ. ಸಮಾಜದ ವಿವಿಧ ಜಾತಿಯ ಸ್ವಾಮೀಜಿಗಳು, ಮುಖಂಡರು ಹಿಂದೂ ಧರ್ಮದ ವಿಶೇಷತೆಗಳನ್ನು ಮನವರಿಕೆ ಮಾಡಿ ಒಲಿಸು ಸೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ನಮ್ಮ ಹೃದಯ ವಿಶಾಲವಾಗಬೇಕು ಎಂದ ಅವರು ಬಜರಂಗದಳದ ಈ ಯೋಜನೆಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.ವೇದಿಕೆಯಲ್ಲಿ ವಿ.ಹಿಂ.ಪ.ದ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗ ದಳ ಸಹಸಂಯೋಜಕ ದಿನೇಶ್ ಚಾರ್ಮಾಡಿ, ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಠೆ ಉಪಸ್ಥಿತರಿದ್ದರು.