ಬೆಂಗಳೂರು : ಸಿಇಟಿ ಪರೀಕ್ಷೆ ವೇಳೆ ಶಿವಮೊಗ್ಗ ಮತ್ತು ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜಕೀಯ ನಾಯಕರು ಪಕ್ಷಾತೀತವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಇದು ಅತ್ಯಂತ ಹೀನ ಕೃತ್ಯವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ನೀಡಲು ಆಗ್ರಹಿಸಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಂಸದ ಬಸವರಾಜ ಬೊಮ್ಮಾಯಿ, ಇದು ಅತ್ಯಂತ ಹೀನ ಕೃತ್ಯ. ಸಂಸ್ಕಾರವೇ ಗೊತ್ತಿಲ್ಲದ ಅಧಿಕಾರಿಗಳ ಹೃದಯಶೂನ್ಯ ವರ್ತನೆ ಎಂದು ಕಿಡಿ ಕಾರಿದ್ದಾರೆ.
ಅನಾಗರಿಕ ಅಧಿಕಾರಿಗಳ ವರ್ತನೆ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಿ, ಅವರ ಮುಂದಿನ ಶೈಕ್ಷಣಿಕ ಬದುಕಿಗೆ ಅವಕಾಶ ಕಲ್ಪಿಸಿಕೊಡಬೇಕು. ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಈ ರೀತಿಯ ಘಟನೆಗಳು ಮರುಕಳಿಸದಂತೆ ಶಿಕ್ಷಣ ಸಚಿವರು ಮತ್ತು ಸಿದ್ದರಾಮಯ್ಯ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಜನಿವಾರ ತೆಗೆಸುವ ಅತಿರೇಕದ ವರ್ತನೆ ತೋರಿ ಬ್ರಾಹ್ಮಣ ಸಮುದಾಯಕ್ಕೆ ಅಪಚಾರ ಎಸಗಿದ ಅಧಿಕಾರಿ ವಿರುದ್ಧ ಕ್ರಮ ಆಗಬೇಕು. ಮನಸೋ ಇಚ್ಛೆ ವರ್ತಿಸಿ ಸಮಾಜದ ಸ್ವಾಸ್ತ್ಯ ಕೆಡಿಸಿದರೆ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ವಿಜಯಪುರದಲ್ಲಿ ಮಾತನಾಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಅಧಿಕಾರಿಯ ಈ ಕ್ರಮ ತಪ್ಪು. ಜನಿವಾರ ತೆಗೆಸಬೇಕು ಎಂದು ಸರ್ಕಾರ ಯಾವುದೇ ಆದೇಶ ಮಾಡಿಲ್ಲ, ಮಾಡೋದೂ ಇಲ್ಲ. ತಿಳುವಳಿಕೆ ಇಲ್ಲದ ಅಧಿಕಾರಿ ಮಾಡಿದ ತಪ್ಪಿಗೆ ಸಮಾಜ ತಲೆ ತಗ್ಗಿಸುವ ಹಾಗಾಗಿದೆ. ಘಟನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ತಪ್ಪು ಮಾಡಿದ ಅಧಿಕಾರಿ ವಿರುದ್ಧ ತನಿಖೆ ಆಗಬೇಕು. ವಿದ್ಯಾರ್ಥಿಗೆ ನ್ಯಾಯ ಸಿಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಸಚಿವ ಎಂ.ಸಿ.ಸುಧಾಕರ್ ಕೂಡ, ಸರ್ಕಾರದಿಂದ ಯಾವುದೇ ಆದೇಶ ಆಗಿಲ್ಲ ಎಂದು ಸ್ಪಷ್ಟಪಡಿಸಿ, ಘಟನೆಯನ್ನು ಖಂಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ, ನಮಗೆ ಜನಿವಾರ ಅತ್ಯಂತ ಮಹತ್ವವಾದದ್ದು, ಮೌಲ್ಯವಾದದ್ದು. ಜನಿವಾರದ ಮೂಲಕ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದೇವೆ. ಜನಿವಾರ ತೆಗೆಸಿ ಅವಮಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಬೇಕು ಅಥವಾ ಅಂಕ ನೀಡಿ ಸರ್ಕಾರಿ ಕಾಲೇಜಿನಲ್ಲಿ ಸೀಟು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಕಿವಿಯೋಲೆ ತೆಗೆಸಿದಾಗಲೂ ವಿವಾದ ಆಗಿತ್ತು. ಮಾಂಗಲ್ಯ ತೇಗಿಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ ತೆಗೆಯಲು ಪ್ರಾರಂಭ ಮಾಡಿದ್ದಾರೆ. ಸರ್ಕಾರಕ್ಕೆ, ಮಂತ್ರಿಗಳಿಗೆ, ಉನ್ನತ ಅಧಿಕಾರಿಗಳ ಗಮನಕ್ಕೆ ಬರದೆ ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?. ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಿಲ್ಲ, ಗೌಡ ಸಾರಸ್ವತರು, ವಿಶ್ವಕರ್ಮ ಸೇರಿ ಇತರ ಕೆಲ ಸಮುದಾಯದವರೂ ಹಾಕುತ್ತಾರೆ. ಯಜ್ಞೋಪವೀತವನ್ನು ಜನ ಪವಿತ್ರ ಎಂದು ಭಾವಿಸುತ್ತಾರೆ. ಇಂತಹ ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಿ ಎನ್ನುವುದು ಸರಿಯಲ್ಲ. ಒಂದು ಧರ್ಮದವರು ಏನು ಬೇಕಾದರೂ ಹಾಕಬಹುದು, ಮತ್ತೊಂದು ಧರ್ಮದವರು ಏನೂ ಹಾಕುವಂತಿಲ್ಲ ಎಂಬ ಧೋರಣೆ ಸರಿಯಲ್ಲ ಎಂದು ಕಿಡಿ ಕಾರಿದರು.