ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಅನೇಕ ಸಲ ಮನವಿ ಮಾಡಿದರೂ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಹಾರ ಒದಗಿಸಿಲ್ಲ. ಇದರಿಂದ ಇದೇ 6ರಂದು ಹಟ್ಟಿ ಚಿನ್ನದ ಗಣಿಗೆ ಆಗಮಿಸುವ ಮುಖ್ಯಮಂತ್ರಿಗಳನ್ನು ಅಡ್ಡಗಟ್ಟಿ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಲು ಸಿಪಿಐ(ಎಂಎಲ್) ರೆಡ್‌ಸ್ಟಾರ್, ಟಿಯುಸಿಐ, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ನೇತೃತ್ವದಲ್ಲಿ ಜಿಲ್ಲೆಯ ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು, ಭೂರಹಿತರು ಹಟ್ಟಿ ಚಲೋ ಕಾರ್ಯಕ್ರಮದಲ್ಲಿ ಪಾಳ್ಗೊಳ್ಳಬೇಕೆಂದು ಸಿಪಿಐ(ಎಂಎಲ್) ರೆಡ್ ಸ್ಟಾರ್‌ನ ಪಾಲಿಟ್ ಬ್ಯೂರೋ ಸದಸ್ಯ ಆರ್.ಮಾನಸಯ್ಯ ಕರೆ ನೀಡಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ 2 ಬಾರಿ ಆಗಮಿಸಿದಾಗ ಜಿಲ್ಲೆಯ ಸಮಸ್ಯೆಗಳ ಪರಿಹಾರ ಆಗುತ್ತವೆ ಎಂಬ ಭಾವನೆ ಇತ್ತು, ಜಿಲ್ಲೆಯ ಜನರಿಗೆ ಲಾಭವಾಗಿಲ್ಲ ಬದಲಾಗಿ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಹಾಗೂ ಅವರ ಹಿಂಬಾಲಕರಿಗೆ ಲಾಭವಾಯಿತೇ ವಿನಹಃ ಜನರ ಸಮಸ್ಯೆಗಳು ಪರಿಹಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಟ್ಟಿ ಚಿನ್ನದ ಗಣಿಗೆ ಮುಖ್ಯಮಂತ್ರಿಗಳು ಇದೇ 6ರಂದು ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನಿಸಬೇಕಿರುವ ಅಂಶವೆಂದರೆ ಹಟ್ಟಿ ಚಿನ್ನದಗಣಿ ಕಂಪನಿಯ ಆಪತ್ಕಾಲದ ನಿಧಿ ₹1000 ಕೋಟಿ ಇದೆ. ಇದರಲ್ಲಿ 998.50 ಕೋಟಿ ರು. ವೆಚ್ಚದಲ್ಲಿ ಟೌನ್ಶಿಪ್ ನಿರ್ಮಾಣ, ₹25 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿ ಸೇರಿದಂತೆ ಕೆಲಸಗಳನ್ನು ಕೈಗೆತ್ತಿಗೊಳ್ಳುವ ಮೊದಲು ಆಪತ್ಕಾಲದ ಅನುದಾನವನ್ನು ಚಿನ್ನ ಗಣಿಗಾರಿಕೆ ವಿಸ್ತರಣೆಗೆ ಬಳಕೆ ಮಾಡಿದ್ದರೆ ಇಲ್ಲಿಯ ವಿದ್ಯಾವಂತ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಸರ್ಕಾರದ ಹಣದಲ್ಲಿ ಅಭಿವೃದ್ಧಿ ಮಾಡಬೇಕಿತ್ತು. ಚಿನ್ನದ ಗಣಿ ಹಣ ಬಳಕೆ ಮಾಡುತ್ತಿರುವುದು ಕಂಪನಿಗೆ ಆಪತ್ತು ಎದುರಾದಾಗ ಹಣದ ಹೊಂದಾಣಿಕೆಗೆ ಕಷ್ಟಕರವಾಗಲಿದೆ. ಇದನ್ನು ಮುಖ್ಯಮಂತ್ರಿಗಳು ಗಮನಿಸಬೇಕೆಂದು ಒತ್ತಾಯಿಸಿದರು.ತುಂಗಭದ್ರ ಕಾರ್ಮಿಕರಿಗೆ 7 ತಿಂಗಳ ವೇತನ ಕೂಡಲೇ ವೇತನ ಪಾವತಿ ಮಾಡಬೇಕು, ಜವಳಗೇರಾದ 1064 ಎಕರೆ ಹೆಚ್ಚುವರಿ ಭೂಮಿ ಭೂ ರಹಿತರಿಗೆ ಹಂಚಿಕೆ ಮಾಡಬೇಕು, ಹಟ್ಟಿ ಚಿನ್ನದ ಗಣಿ ಆಪತ್ಕಾಲದ ನಿಧಿಯಡಿ ವಂದಲಿ, ಸಾನಬಾಳ, ಚಿಕ್ಕನಗನೂರಲ್ಲಿ ಗಣಿಗಾರಿಕೆ ಮಾಡಬೇಕು, ರಾಯಚೂರಿನ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರಿಗೆ ಪರಿಹಾರ ನೀಡಬೇಕು, ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರ ಪಾರಂ ನಂಬರ್ ತಿರಸ್ಕಾರ ಮಾಡಿದ್ದು ಇದು ಘೋರ ಅನ್ಯಾಯವಾಗಿದೆ. ಕೂಡಲೇ ಬಡ ಸಾಗುವಳಿ ದಾರರಿಗೆ ಪಟ್ಟಾ ನೀಡಬೇಕು, ಸುರಾನ ಇಂಡಸ್ಟ್ರೀಸ್ ಕಂಪನಿ ಲಿಮಿಟೆಡ್ ಕಂಪನಿ ಮೇಲೆ ಕೇಸ್ ದಾಖಲಿಸಿ ಆಸ್ತಿ ಮುಟ್ಟುಗೋಲುಹಾಕ ಬೇಕೆಂದು ಆಗ್ರಹಿಸಿದರು.
ಈ ವೇಳೆ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಅಮೀರ್ ಅಲಿ, ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ತಾಲೂಕ ಅಧ್ಯಕ್ಷ ವೀರಭದ್ರಪ್ಪ ಹಡಪದ ಇದ್ದರು.