ಗದಗ: ಪ್ರತಿಜ್ಞೆ ಗೈಯುವ ಮೂಲಕ ಸೇವಾ ತಂಡದ ಕಾರ್ಯಕ್ರಮಗಳನ್ನು ಸಾರ್ಥಕ ಭಾವನೆಯಿಂದ ಕೈಗೊಳ್ಳುತ್ತಿರುವುದು ಜನಸೇವಾ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆ ನಿಟ್ಟಿನಲ್ಲಿ ಸೇವಾ ತಂಡದ ಸದಸ್ಯರಿಂದ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಜನರಿಗೆ ಆರೋಗ್ಯ ಸೇವೆ, ರಕ್ತದಾನ ಶಿಬಿರ, ಹೃದಯ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ ಸೇರಿದಂತೆ ಒಬ್ಬ ಕ್ಯಾಪ್ಟನ್ ವ್ಯಾಪ್ತಿಗೆ ಬರುವ 50 ಕುಟುಂಬಗಳ ಜನರ ಊಟ, ಪಾಠ, ಮಾನ್ಯತೆ, ಆರೋಗ್ಯ ಮತ್ತು ಸರ್ಕಾರದ ಸೌಲಭ್ಯಗಳನ್ನು ಕೊರತೆಯಾಗದಂತೆ ಸೇವಾ ಹಾಗೂ ನಿಸ್ವಾರ್ಥ ಭಾವನೆಯಿಂದ ಮಾಡುವ ನಿಟ್ಟಿನಲ್ಲಿ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ ಎಂದರು.
ಸೇವಾ ತಂಡದ ವಿಶಿಷ್ಟ ಕಾರ್ಯಕ್ರಮಗಳು ಪ್ರತಿ ಬಡವರ ಬದುಕಿನಲ್ಲಿ ಭರವಸೆಯನ್ನು ಮೂಡಿಸುತ್ತಿದ್ದು, ಅಂಗಾಂಗ ದಾನದಲ್ಲಿ ಗದಗ ಜಿಲ್ಲೆ ಸದ್ಯ 4ನೇ ಸ್ಥಾನದಲ್ಲಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ 3000 ಸಾವಿರಕ್ಕೂ ಅಧಿಕ ಜನರು ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸೇವಾ ತಂಡದ ಸದಸ್ಯರ ರಚನಾತ್ಮಕ ಕೆಲಸ ರಾಜ್ಯಕ್ಕೆ ಮೊದಲ ಸ್ಥಾನ ತಲುಪಲಿದ್ದು, ನಿಮ್ಮ ಸೇವಾ ದೀಕ್ಷೆಯಿಂದ ಅಂಗಾಂಗ ದಾನ ಮಾಡಲು ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಮಾತೃ ಹೃದಯದಿಂದ ಬಡವರ ಏಳಿಗೆಗಾಗಿ ಸೇವಾ ತಂಡದ ಮೂಲಕ ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿನೂತನವಾದ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ಇಂಥ ನಿರ್ಮಲ ಮನಸ್ಸಿನಿಂದ ಮಾಡುವ ಕೆಲಸದಿಂದ ಎಚ್.ಕೆ. ಪಾಟೀಲರು ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸುತ್ತಿದ್ದಾರೆ ಎಂದರು.
ಈ ವೇಳೆ ಅಧ್ಯಕ್ಷತೆಯನ್ನು ಪ್ರಭು ಬರಬುರೆ ವಹಿಸಿದ್ದರು. ಡಾ. ನೂರಾಣಿ, ಡಾ. ಎಸ್.ಆರ್. ನಾಗನೂರ, ಕೃಷ್ಣಾ ಪರಾಪುರ, ಎಂ.ಸಿ. ಶೇಖ, ಗುರಣ್ಣ ಬಳಗಾನೂರ, ಎಲ್.ಡಿ. ಚಂದಾವರಿ ಸೇರಿದಂತೆ ಮತ್ತಿತರರು ಇದ್ದರು. ಅಶೋಕ ಮಂದಾಲಿ ಸ್ವಾಗತಿಸಿದರು. ಬಸವರಾಜ ಕಡೆಮನಿ ನಿರೂಪಿಸಿದರು.