ಸಾಯಿಬಾಬಾ ಮಂದಿರ ಪ್ರವಾಸಿ ತಾಣವಾಗಲಿ

KannadaprabhaNewsNetwork | Published : Jun 17, 2024 1:42 AM

ಸಾರಾಂಶ

ತಾಲೂಕಿನ ಗುಯಿಲಾಳು ಟೋಲ್ ಪಕ್ಕದಲ್ಲಿರುವ ಶ್ರೀ ಸದ್ಗುರು ಸಾಯಿ ದತ್ತಾಶ್ರಮದಲ್ಲಿ ಭಾನುವಾರ ದೇವಾಲಯದ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಿಸಿ ರಸ್ತೆ ಕಾಮಗಾರಿಗೆ ಸಚಿವ ಡಿ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಧಾರ್ಮಿಕ ತಳಹದಿಯ ಮೇಲೆ ನಿಂತಿರುವ ದೇಶ ನಮ್ಮದಾಗಿದ್ದು, ಭಗವಂತನನ್ನು ನಂಬಿದರೆ ಮಾತ್ರ ಬದುಕಿನಲ್ಲಿ ನೆಮ್ಮದಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ತಾಲೂಕಿನ ಗುಯಿಲಾಳು ಟೋಲ್ ಪಕ್ಕದಲ್ಲಿರುವ ಶ್ರೀ ಸದ್ಗುರು ಸಾಯಿ ದತ್ತಾಶ್ರಮದಲ್ಲಿ ಭಾನುವಾರ ದೇವಾಲಯದ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಕೋಟ್ಯಾಂತರ ಬಾಬಾ ಭಕ್ತರು ಇದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವ ಬಾಬಾ ಎಂದು ನಂಬಲಾಗಿದ್ದು, ಬಾಬಾ ಮಂದಿರ ಭಕ್ತಿಯ ಕೇಂದ್ರವಾಗುವ ಜೊತೆಗೆ ಖ್ಯಾತ ಪ್ರವಾಸಿ ಕೇಂದ್ರವಾಗಲಿ. ಮಂದಿರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಾಯಿಬಾಬಾ ಮಂದಿರದ ಸಂಸ್ಥಾಪಕರಾದ ಶ್ರೀ ಗುರುಮೂರ್ತಿ ಗುರೂಜಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಬಾ ಮಂದಿರ ನಿರ್ಮಿಸಿದರೆ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸಾಯಿಬಾಬಾ ದರ್ಶನ ಪಡೆಯಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ಜಾಗವನ್ನು ಆಯ್ಕೆ ಮಾಡಲಾಗಿದೆ. ಸಚಿವ ಡಿ. ಸುಧಾಕರ್ ರವರು ಬಾಬಾ ಮೂರ್ತಿ ಕೊಡಿಸಿದ್ದಾರೆ. ಮಾಜಿ ಶಾಸಕಿ ಪೂರ್ಣಿಮಾರವರು ಶಾಸಕರಾಗಿದ್ದಾಗ ತಮ್ಮ ಅನುದಾನದಲ್ಲಿ ನೀಡಿದ್ದ 20 ಲಕ್ಷದ ಜೊತೆ ಇನ್ನೂ 13 ಲಕ್ಷವನ್ನು ಸಚಿವರು ನೀಡಿದ್ದಾರೆ. ಇದೊಂದು ಪುಣ್ಯಭೂಮಿಯಾಗಬೇಕು ಎಂಬ ಮಹದಾಸೆ ಇದ್ದು, ಮೂರ್ನಾಲ್ಕು ತಿಂಗಳಲ್ಲಿ ಮಂದಿರ ಲೋಕಾರ್ಪಣೆ ಮಾಡಲಾಗುವುದು. ಮಂದಿರದ ಆವರಣದಲ್ಲಿ ಯಾಗಶಾಲೆ, ಯೋಗಮಂಟಪ ನಿರ್ಮಿಸುವ ಆಲೋಚನೆ ಇದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಶೋಷಿತ ಸಮುದಾಯಗಳಿಗೆ ಸಾಯಿಬಾಬಾರು ಪವಾಡ ಪುರುಷರಾಗಿ ಹೊರ ಹೊಮ್ಮಿದ್ದಾರೆ. ಸಂತರ ಸಾಲಿನಲ್ಲಿ ಬಾಬಾ ಅವರಿಗೆ ಮೊದಲ ಸ್ಥಾನವಿದೆ. ಮಹರಾಷ್ಟ್ರಕ್ಕೆ ಹೋಗಿ ಬಾಬಾ ದರ್ಶನ ಮಾಡಲು ಸಾಧ್ಯವಿಲ್ಲದವರಿಗೆ ಇಲ್ಲಿಯೇ ದರ್ಶನ ಭಾಗ್ಯ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹನುಮಪ್ಪ ರೆಡ್ಡಿ, ಬಾಬಾ ಮಂದಿರದ ಶ್ರೀ ಶಿವಾನಂದ್ ಗುರೂಜಿ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ, ಹೆಚ್.ಆರ್. ತಿಮ್ಮಯ್ಯ, ಬಬ್ಬೂರು ಸುರೇಶ್, ಖಾದಿ ರಮೇಶ್, ಈರಲಿಂಗೇಗೌಡ, ಆರ್. ನಾಗೇಂದ್ರನಾಯ್ಕ ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಆಲೂರು ಸಿದ್ದರಾಮಣ್ಣ, ಆರನಕಟ್ಟೆ ಶಿವಕುಮಾರ್, ಗುಯಿಲಾಳು ಮಹಂತೇಶ್, ಹರ್ತಿಕೋಟೆ ತಿಪ್ಪೇಸ್ವಾಮಿ, ಉದ್ಯಮಿ ಆನಂದ ಶೆಟ್ಟಿ, ನಾಗರಾಜಯ್ಯ ಮುಂತಾದವರು ಉಪಸ್ಥಿತರಿದ್ದರು.

Share this article