ಕಾರವಾರ: ಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡುವ ಕೇಂದ್ರಗಳಾಗುವುದು ಮಾತ್ರವಲ್ಲದೇ ಅವರಿಗೆ ಶಿಕ್ಷಣದ ಜತೆಗೆ ಸಂಪೂರ್ಣ ಸುರಕ್ಷೆ ಒದಗಿಸುವ ರಕ್ಷಣಾ ಕೇಂದ್ರಗಳಾಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲೆಯ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಆಯೋಜಿಸಿದ್ದ ಶಾಲೆಯಲ್ಲಿದೆ ಶಿಕ್ಷಣದ ಜತೆಗೆ ರಕ್ಷಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಮಕ್ಕಳು ಶಾಲೆಯಿಂದ ಕ್ಷೇಮವಾಗಿ ಮನೆಗೆ ಬಂದರೆ ಸಾಕು ಎನ್ನುವಂತಾಗಿದೆ. ಕಾರಣ ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು, ಶಾಲಾ ಆವರಣದಲ್ಲಿ ಸೂಕ್ತ ರಕ್ಷಣೆಯಿಲ್ಲದೇ ಅಸಹಜ ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಶಾಲೆಯಲ್ಲಿ ಮಕ್ಕಳ ರಕ್ಷಣೆಗೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಮತ್ತು ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿಕೊಂಡು ಸಂಪೂರ್ಣ ರಕ್ಷಣೆ ಒದಗಿಸುವ ಮೂಲಕ ಅವರಿಗೆ ಶಿಕ್ಷಣದ ಜತೆಗೆ ರಕ್ಷಣೆ ನೀಡುವ ಕೆಲಸವಾಗಬೇಕಿದೆ ಎಂದರು.
ಶಾಲೆಗಳಲ್ಲಿ ಕೇವಲ ಶಿಕ್ಷಣ ಕೊಡುವುದಷ್ಟೆ ಅಲ್ಲದೇ ಮಕ್ಕಳಿಗೆ ರಕ್ಷಣೆಯನ್ನು ನೀಡಬೇಕೆಂಬುವುದು ಕೋವಿಡ್ ನಂತರ ಸ್ಪಷ್ಟವಾಗಿ ತಿಳಿದುಬರುತ್ತಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ 18 ವರ್ಷದೊಳಗಿನ ಸುಮಾರು 5,000 ಮಕ್ಕಳು ಅಸಹಜ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ 21 ಇಲಾಖೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಕೆಲಸ ಮಾಡಬೇಕಿದೆ. ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಅನೇಕ ಇಲಾಖೆಗಳು ಮತ್ತು ಸಮಿತಿಗಳು ಇದ್ದರು ಕೂಡ ರಾಜ್ಯ ಆಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಿದ್ದು, ಖಾಸಗಿ ಶಾಲೆಗಳಲ್ಲಿ ವರ್ಗಾವಣೆ ಪತ್ರ ನೀಡದೆ ಇರುವ ಸಂಬಂಧಿಸಿದ 250 ಪ್ರಕರಣಗಳ ದೂರುಗಳು ಆಯೋಗಕ್ಕೆ ಬಂದಿವೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಭೌತಿಕ ಶಿಕ್ಷಣದ ಜತೆಗೆ ಮಾನಸಿಕವಾಗಿ ಸಧೃಡರನ್ನಾಗಿ ಮಾಡಬೇಕು. ಮಕ್ಕಳು ಮನೆಗಿಂತಲೂ ಹೆಚ್ಚಿನ ಸಮಯ ಶಾಲೆಗಳಲ್ಲಿ ಕಳೆಯಲಿದ್ದು, ಅವರು ಶಾಲೆಯಲ್ಲಿ ಶಿಕ್ಷಕರೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಪೋಷಕರು ತಮ್ಮ ಮಕ್ಕಳು ಸುರಕ್ಷಿತ ವಾತಾವರಣದಲ್ಲಿರುತ್ತಾರೆ ಎಂಬ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿರುತ್ತಾರೆ. ಇದಕ್ಕೆ ಚ್ಯುತಿ ಬಾರದಂತೆ ಶಿಕ್ಷಕರು ಮಕ್ಕಳ ಕಾಳಜಿ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್, ಕಾರವಾರ ಡಿಡಿಪಿಐ ಲತಾ ನಾಯಕ, ಶಿರಸಿ ಡಿಡಿಪಿಐ ಪಿ. ಬಸವರಾಜ, ಡಯಟ್ ಪ್ರಾಂಶುಪಾಲ ಶಿವರಾಮ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಸ್. ಭಟ್, ಸಂತೋಷ್ ಇದ್ದರು.