ಸರಳತೆ, ಸತ್ಯ, ಅಹಿಂಸೆ, ಸೇವೆ ಬದುಕಿನ ಭಾಗವಾಗಲಿ: ಡಾ. ಸುರೇಶ ಇಟ್ನಾಳ್

KannadaprabhaNewsNetwork |  
Published : Oct 03, 2026, 02:15 AM IST
ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಮಹಾತ್ಮ ಗಾಂಧೀಜಿ 157ನೇ ಜಯಂತಿ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹಾತ್ಮ ಗಾಂಧೀಜಿ 157ನೇ ಜಯಂತಿ ನಡೆಯಿತು.

ಕೊಪ್ಪಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಮಗೆ ತೋರಿಸಿಕೊಟ್ಟ ಸರಳತೆ, ಸೇವೆ, ಸತ್ಯ, ಅಹಿಂಸೆ ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಮಹಾತ್ಮ ಗಾಂಧೀಜಿ 157ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿಯೇ ಗಾಂಧೀಜಿ ಪ್ರಾಮಾಣಿಕತೆ, ಶಿಸ್ತು ಹಾಗೂ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಂಡಿದ್ದರು. ಅನ್ಯಾಯದ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹದ ಮೂಲಕ ಹೋರಾಟ ನಡೆಸಿದ ಅವರ ಆದರ್ಶವನ್ನು ಇಂದಿನ ಯುವಜನತೆ ಮಾದರಿಯಾಗಿಸಿಕೊಳ್ಳಬೇಕು. ಅಸಮಾನತೆ ಹಾಗೂ ತಾರತಮ್ಯದ ವಿರುದ್ಧ ನ್ಯಾಯಯುತವಾಗಿ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

1965ರ ಯುದ್ಧದ ಸಂದರ್ಭದಲ್ಲಿ ‘ಜೈ ಜವಾನ್, ಜೈ ಕಿಸಾನ್’ ಘೋಷಣೆ ನೀಡಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಯನ್ನೂ ಸ್ಮರಿಸಬೇಕು ಎಂದರು.

ಪ್ಲಾಸ್ಟಿಕ್ ಮುಕ್ತ ಕೊಪ್ಪಳ ಅಭಿಯಾನ: ದಸರಾ ರಜೆ ಬಳಿಕ ಜಿಲ್ಲಾದ್ಯಂತ ‘ಪ್ಲಾಸ್ಟಿಕ್ ಮುಕ್ತ ಕೊಪ್ಪಳ’ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ಪುಣೆಯ ಪ್ಲಾಸ್ಟಿಕ್ ಮರುಬಳಕೆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲು ಅವಕಾಶ ನೀಡಿ, ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸುವವರಿಗೆ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಮಾಡಲಾಗುವುದು. ಅಭಿಯಾನಕ್ಕೆ ನಾಗರಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಹಿರಿಯ ಸಾಹಿತಿ ರವಿತೇಜ್ ಅಬ್ಬಿಗೇರಿ ವಿಶೇಷ ಉಪನ್ಯಾಸ ನೀಡಿ, ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ; ಸಮಾಜ ವಿಜ್ಞಾನಿ, ರಾಜನೀತಿಜ್ಞ, ಅರ್ಥಶಾಸ್ತ್ರಜ್ಞ ಹಾಗೂ ಶಿಕ್ಷಣ ತಜ್ಞರೂ ಆಗಿದ್ದರು. ದುಡಿಮೆ ಇಲ್ಲದ ಸಂಪತ್ತು, ನೀತಿ ಇಲ್ಲದ ವ್ಯಾಪಾರ ಹಾಗೂ ತತ್ವರಹಿತ ರಾಜಕಾರಣ ಇರಬಾರದು ಎಂಬ ಗಾಂಧೀಜಿ ಸಪ್ತ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದ ಉನ್ನತಿ ಸಾಧ್ಯ ಎಂದರು.

1934ರ ಮಾರ್ಚ್ 3ರಂದು ಬಳ್ಳಾರಿಯಿಂದ ಗದಗಕ್ಕೆ ತೆರಳುವ ಮಾರ್ಗದಲ್ಲಿ ಗಾಂಧೀಜಿ ಅವರು ಕೊಪ್ಪಳ ಸಮೀಪದ ಭಾನಾಪುರ ರೈಲು ನಿಲ್ದಾಣದಲ್ಲಿ ಸುಮಾರು 90 ನಿಮಿಷ ತಂಗಿದ್ದ ಐತಿಹಾಸಿಕ ಘಟನೆಯನ್ನು ಅವರು ಸ್ಮರಿಸಿದರು. ಆ ಸಂದರ್ಭದಲ್ಲಿ ತಳಕಲ್ ಗ್ರಾಮದ ಕಾಳಪ್ಪ ಬಡಿಗೇರ್ ಗಾಂಧೀಜಿ ಭಾವಚಿತ್ರ ಬಿಡಿಸಿ ಅರ್ಪಿಸಿದ್ದು, ಚುಕ್ಕವ್ವ ಹರಿಜನ ಅವರು ತಾಮ್ರದ ಬಿಂದಿಗೆಯಲ್ಲಿ ಹಾಲು ಅರ್ಪಿಸಿದ್ದರು ಎಂದು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ