ಸ್ವಾಗತ, ಒಕ್ಕೂಟ ಉದ್ಘಾಟನಾ ಸಮಾರಂಭದಲ್ಲಿ ಡಾ.ತೋಂಟದ ಸಿದ್ಧರಾಮಸ್ವಾಮೀಜಿ
ಗದಗ: ಹಿತಮಿತವಾಗಿ ಮಾತನಾಡಬೇಕು. ಮಾತು ಮತ್ತು ಕೃತಿಗಳು ಮನುಷ್ಯನ ಉತ್ತಮ ವ್ಯಕ್ತಿತ್ವದ ಸಂಕೇತಗಳಾಗಿವೆ. ವಿದ್ಯಾರ್ಥಿಗಳು ಪ್ರತಿಭೆ ಮತ್ತು ಪರಿಶ್ರಮಗಳ ಮೂಲಕ ಸಾಮಾಜಿಕ ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ಡಾ.ತೋಂಟದ ಸಿದ್ಧರಾಮಸ್ವಾಮೀಜಿ ಹೇಳಿದರು.ನಗರದ ಜ.ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಮತ್ತು ಒಕ್ಕೂಟ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯೆಯ ಜತೆಗೆ ಉತ್ತಮ ಸಂಸ್ಕಾರ ಹೊಂದಬೇಕು.ಅದಕ್ಕಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅತಿಥಿಗಳ ಅನುಭಾವದ ಮಾತು ಆಲಿಸಬೇಕು.ನಾಗರಿಕತೆಯು ಬಾಹ್ಯ ಜೀವನದ ಶಿಸ್ತಿಗೆ ಅಡಿಪಾಯವಾದರೆ ಸಂಸ್ಕೃತಿಯು ಅಂತರಂಗದ ಪರಿಶುದ್ಧತೆಗೆ ಅಡಿಪಾಯವಾಗಿದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಪದವಿಗಿಂತ ಸನ್ನಡತೆ ಮುಖ್ಯ. ಅದಕ್ಕಾಗಿ ದುರ್ಬುದ್ಧಿ ಬೆಳೆಸುವ ಹವ್ಯಾಸಗಳಿಂದ ದೂರವಿದ್ದು ಉತ್ತಮವಾದ ಮಾನವೀಯ ಮೌಲ್ಯ ಬೆಳೆಸಿಕೊಂಡು ಮೌಲಿಕ ವ್ಯಕ್ತಿತ್ವ ಹೊಂದಬೇಕೆಂದು ತಿಳಿಸಿದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸರ್ವತೋಮುಖ ವ್ಯಕ್ತಿತ್ವ ಬೆಳೆಸುವ ಒಕ್ಕೂಟದ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ೨೧ನೇ ಶತಮಾನ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗದೆ ಜ್ಞಾನ ಮತ್ತು ಕೌಶಲ್ಯದ ಯುಗವೂ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಮಯ ಮತ್ತು ಕರ್ತವ್ಯ ಪ್ರಜ್ಞೆ ಬೆಳೆಸಿಕೊಂಡು ಸಾಧನೆ ಮಾಡಬೇಕು ಎಂದರು.
ಈ ವೇಳೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಶಶಿಧರ ಸಾಲಿ ಹಾಗೂ ಬಲರಾಮ ಬಸವಾ ವೇದಿಕೆ ಉದ್ದೇಶಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಎ, ಬಿಕಾಂ, ಬಿಎಸ್ಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈಶಣ್ಣ ಮುನವಳ್ಳಿ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣ್ಣಶೆಟ್ಟಿ, ಸ್ಥಾನಿಕ ಆಡಳಿತಮಂಡಳೀಯ ಸದಸ್ಯ ಅಮರೇಶ ಅಂಗಡಿ, ಮೋಹನ ಅಲ್ಮೇಲಕರ, ಶೇಖಣ್ಣ ಕಳಸಾಪೂರಶೆಟ್ಟರ, ವಿದ್ಯಾಧರ ದೊಡ್ಡಮನಿ, ಸಿದ್ಧಲಿಂಗಯ್ಯ ಹಿರೇಮಠ, ಲಿಂಗರಾಜ ಪಾಟೀಲ ಸೇರಿದಂತೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.
ರಾಜೇಶ್ವರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾ. ಎಂ.ಎಂ. ಬುರಡಿ ಸ್ವಾಗತಿಸಿದರು. ಕೆ.ವಿ. ಬಾಗಲಕೋಟಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.