ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿ: ಡಾ.ಸಿ.ಎಸ್. ಶಿವಾನಂದ

KannadaprabhaNewsNetwork | Published : Dec 3, 2024 12:34 AM

ಸಾರಾಂಶ

ಗದಗ ಜೆ.ಟಿ. ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ, ಇತ್ತೀಚಿನ ದಿನಮಾನಗಳಲ್ಲಿ ಭೌತಶಾಸ್ತ್ರದಲ್ಲಿ ಬೆಳವಣಿಗೆಗಳ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು. ಇಬ್ಬರು ಉಪನ್ಯಾಸಕರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಗದಗ: ವಿದ್ಯಾರ್ಥಿಗಳು ಕೇವಲ ವ್ಯಾಸಂಗಕ್ಕೆ ಸೀಮಿತರಾಗದೆ ಹೆಚ್ಚಿನ ಸಮಯವನ್ನು ಸಂಶೋಧನೆಯ ಕಡೆಗೆ ಗಮನಹರಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ತುಂಬಾ ಪ್ರಸ್ತುತವಾಗಿದೆ ಎಂದು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಎಸ್. ಶಿವಾನಂದ ಹೇಳಿದರು.

ಅವರು ಜೆ.ಟಿ. ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ, ಇತ್ತೀಚಿನ ದಿನಮಾನಗಳಲ್ಲಿ ಭೌತಶಾಸ್ತ್ರದಲ್ಲಿ ಬೆಳವಣಿಗೆಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗೋಷ್ಠಿ-1ರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಡಾ.ಸಿ.ಎಸ್. ಶಿವಾನಂದ ಅವರು ಭೌತಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿ, ಸೂಪರ್ ಕಂಡಕ್ಟವಿಟಿ ಮತ್ತು ಅದರ ಪ್ರಯೋಜನಗಳ ಬಗ್ಗೆ ವಿಷಯ ಮಂಡನೆ ಮಾಡಿದರು. ಸೂಪರ್ ಕ್ಟಂಡಕ್ಟಿವಿಟಿ ಗುಣ-ದೋಷಗಳ ಬಗ್ಗೆ ವಿಶ್ಲೇಷಣೆ ಮಾಡಿದರು.

ಗೋಷ್ಠಿ-2ರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ದಾವಣಗೆರೆಯ ಜಿ.ಎಂ. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಜಂಗನ್ನವರ ನ್ಯಾನೋ ಟೆಕ್ನಾಲಜಿ ಬೆಳವಣಿಗೆ, ಮಹತ್ವ ಮತ್ತು ಅದರ ಪ್ರಯೋಜನಗಳನ್ನು ವಿಷಯ ಮಂಡನೆ ಮಾಡಿದರು. ಇಬ್ಬರು ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಜಿ. ಪಾಟೀಲ, ಇತ್ತೀಚಿನ ಭೌತಶಾಸ್ತ್ರದಲ್ಲಿ ಆದ ಬೆಳವಣಿಗೆಗಳು ಮತ್ತು ಅವುಗಳ ಸಂಶೋಧನೆಯ ಪ್ರಾಮುಖ್ಯತೆಗಳ ಬಗ್ಗೆ ವಿವರಿಸಿದರು. ಶಾಯಿನ್ ಪ್ರಾರ್ಥಿಸಿದರು. ಬಸವರಾಜ ಮತ್ತು ಮೇಹಕ್ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಹತಬುಟ್ಟು ವಂದಿಸಿದರು. ರಾಜಕುಮಾರ ಬಡಿಗೇರ, ಡಾ.ಜಿ.ಕೆ. ರಮೇಶ, ಡಾ. ರಘು, ಡಾ. ಕರ್ಣಕುಮಾರ, ರೇಖಾ ಗುಡ್ಲೇರಿ, ತೇಜಸ್ವಿನಿ ಮಲರಡ್ಡಿ, ಬಿ.ವಿ. ಬೆಲ್ಲದ, ಡಿ.ಆರ್. ಮಮದಾಪುರ ಭಾಗವಹಿಸಿದ್ದರು. ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ 165ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Share this article