ಸಂಡೂರು: ಭಾರತ ದೇಶ ಜ್ಞಾನದ ತವರುಮನೆ. ವಿದ್ಯಾರ್ಥಿಜೀವನ ಹಾಗೂ ಸುಖ ಒಟ್ಟಿಗೆ ಇರಲ್ಲ. ಉತ್ತಮ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ತಾವು ಕಲಿಯುವ ವಿಷಯವನ್ನು ಪ್ರೀತಿಸಿದಾಗ ಮಾತ್ರ ಅದನ್ನು ಬೇಗನೆ ತಿಳಿಯಲು ಸಾಧ್ಯ ಎಂದು ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಜರುಗಿದ ಜಿಂದಾಲ್ ವಿದ್ಯಾನಗರದ ಜೀವನ್ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿಯೇ ಸುಖ ಬಯಸಿದರೆ ಉದ್ಧಾರ ಸಾಧ್ಯವಿಲ್ಲ. ಭಾರತ ಪ್ರಾಚೀನ ಕಾಲದಿಂದಲೂ ಜ್ಞಾನ, ವಿಜ್ಞಾನಕ್ಕೆ ಹೆಸರಾಗಿದೆ. ಭವ್ಯ ಪರಂಪರೆಯನ್ನು ಹೊಂದಿದೆ. ಅದನ್ನು ತಿಳಿಯಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಭಾರತೀಯರು ಪ್ರಪಂಚದಲ್ಲಿಯೇ ಅತ್ಯಂತ ಬುದ್ಧಿವಂತರು. ವಿದ್ಯಾರ್ಥಿಗಳು ಮೊದಲು ತಮ್ಮಲ್ಲಿರುವ ಅಗಾಧವಾದ ಶಕ್ತಿಯನ್ನು ಅರಿಯಬೇಕು. ಶಿಕ್ಷಕರು ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸಬೇಕಲ್ಲದೆ, ಅವರಲ್ಲಿರುವ ಜ್ಞಾನ ಕೌಶಲ್ಯವನ್ನು ಹೊರತರಬೇಕು. ವಿದ್ಯಾರ್ಥಿಗಳು ಪಾಲಕರನ್ನು, ಗುರುಹಿರಿಯರನ್ನು ಗೌರವಿಸಬೇಕು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಂದಾಲ್ ಕಂಪನಿಯ ಪ್ರೆಸಿಡೆಂಟ್ ಆಫ್ ಪ್ರಾಜೆಕ್ಟ್ ರಾಜಶೇಖರ್ ಪಟ್ಟಣಶೆಟ್ಟಿ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ವ್ಯಕ್ತಿತ್ವ ವಿಕಸನದಂಥ ಉತ್ತಮ ಕಾರ್ಯಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಜೀವನ್ ಸಂಗೀತ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಛಲ ಮುಖ್ಯ. ನಾವು ಪಡೆದ ಸಮಾಜಕ್ಕಿಂತ ನಾವು ಬಿಟ್ಟುಹೋಗುವ ಸಮಾಜ ಉತ್ತಮವಾಗಿರುವಂತೆ ಮಾಡಲು ಶ್ರಮಿಸಬೇಕು. ಪ್ರತಿಯೊಬ್ಬರೂ ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ನನ್ನ ಜನ, ಇದು ನನ್ನ ದೇಶ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಈ. ತುಕಾರಾಂ ಮಾತನಾಡಿ, ತಂದೆ- ತಾಯಿಗಳ ಹಾಗೂ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಪರಸ್ಪರ ಸಹಕಾರದಿಂದ ಉತ್ತಮ ಸಮಾಜ, ದೇಶ ಕಟ್ಟೋಣ. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಶ್ರಮಿಸೋಣ ಎಂದರು. ಜೀವನ್ ಸಂಗೀತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಗೀತಾ ವೀರೇಶ್ ಅವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನ್ ಸಂಗೀತ ಸಂಸ್ಥೆಯ ಧ್ಯೇಯೋದ್ದೇಶಗಳು, ಹಮ್ಮಿಕೊಂಡ ಹಲವು ಜನೋಪಯೋಗಿ ಮತ್ತು ಪರಿಸರ ಸಂರಕ್ಷಣಾ ಕ್ರಮಗಳ ಕುರಿತು ವಿವರಿಸಿದರು.ಜಿಂದಾಲ್ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಸಾನ್ನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿದರು. ಬಳ್ಳಾರಿಯ ಜಿಲಾನಿ ಬಾಷಾ ನೃತ್ಯ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸುನಿತಾ ಹಾಗೂ ರಾಘವೇಂದ್ರ ಘೋರ್ಪಡೆ ನಿರೂಪಿಸಿದರು. ಮಧು ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಶಿಕ್ಷಣ ಸಂಯೋಜಕ ಬಸವರಾಜ್, ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ, ಜೀವನ್ ಸಂಗೀತ ಸಂಸ್ಥೆಯ ಉಪಾಧ್ಯಕ್ಷೆ ನೀತಾ ನಾವಲ್, ಕಾರ್ಯದರ್ಶಿ ಪ್ರಿಯಾ ಪ್ರಕಾಶ್, ಖಜಾಂಚಿ ನಿರ್ಮಲಾ ನಾಗೇಂದ್ರ, ಸದಸ್ಯರಾದ ರೇಣುಕಾ ದೇಬ್, ಶಿಲ್ಪಾ ಜೋಷಿ, ಮಧು ಮುರಳಿ, ವಾಣಿ, ಆನಂದಪ್ರಿಯಾ, ಸಿ. ನಿರ್ಮಲಾ, ಕಿರಣ್ ಪ್ರಭು, ವಿವಿಧ ಶಾಲೆಗಳು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.