ಸಕ್ಕರೆ ಕಾರ್ಖಾನೆಗಳು ಬಾಲ ಕಾರ್ಮಿಕ ಮುಕ್ತವಾಗಲಿ

KannadaprabhaNewsNetwork |  
Published : Sep 12, 2026, 03:15 AM IST
ಬೆಳಗಾವಿ  | Kannada Prabha

ಸಾರಾಂಶ

ಬಾಲ ಕಾರ್ಮಿಕ ಪದ್ಧತಿ ಎಂಬ ಸಾಮಾಜಿಕ ಪಿಡುಗನ್ನು ತೊಡೆದು ಹಾಕುವುದು ಅಗತ್ಯವಾಗಿದೆ. ಬಾಲ ಕಾರ್ಮಿಕರ ಕುರಿತು ಮಾತನಾಡುವುದು ಸುಲಭವಾಗಿದ್ದು ಇದನ್ನು ತಡೆಗಟ್ಟಲು ಬುದ್ಧಿಜೀವಿಗಳಾದ ನಾವೆಲ್ಲ ಗಂಭೀರವಾಗಿ ಚಿಂತಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಾಲ ಕಾರ್ಮಿಕ ಪದ್ಧತಿ ಎಂಬ ಸಾಮಾಜಿಕ ಪಿಡುಗನ್ನು ತೊಡೆದು ಹಾಕುವುದು ಅಗತ್ಯವಾಗಿದೆ. ಬಾಲ ಕಾರ್ಮಿಕರ ಕುರಿತು ಮಾತನಾಡುವುದು ಸುಲಭವಾಗಿದ್ದು ಇದನ್ನು ತಡೆಗಟ್ಟಲು ಬುದ್ಧಿಜೀವಿಗಳಾದ ನಾವೆಲ್ಲ ಗಂಭೀರವಾಗಿ ಚಿಂತಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಅವರಣದ ಸಭಾಂಗಣದಲ್ಲಿ ಗುರುವಾರ ಜರುಗಿದ ಕೃಷಿ ಕ್ಷೇತ್ರದ ಕಬ್ಬು ಕಟಾವು ಕಾರ್ಯದಲ್ಲಿ ಮಕ್ಕಳ ಬಳಕೆ ನಿಷೇಧಿಸಿ ಸಕ್ಕರೆ ಉತ್ಪಾದಕರಿಗೆ ಆಗುವ ಸವಲತ್ತುಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಕ್ಕರೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಕಂಪನಿಗಳಿಗೆ ಅವಶ್ಯಕವಾದ ಪ್ರಮುಖ ಕಚ್ಚಾ ವಸ್ತು. ಆದರೆ ಕಂಪನಿಗಳಿಗೆ ಅಗತ್ಯವಿರುವ ವಸ್ತುವಿನ ಉತ್ಪಾದನೆ ಅಥವಾ ಉತ್ಪಾದನಾ ಸರಪಳಿಯ ಯಾವುದೇ ಹಂತದಲ್ಲಿ ಮಕ್ಕಳನ್ನು ಬಳಸಿಕೊಂಡು ಉತ್ಪಾದನೆ ಮಾಡಿದ್ದರೆ, ಅಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕಂಪನಿಗಳು ಹಿಂದೇಟು ಹಾಕುತ್ತವೆ. ಹೀಗಾಗಿ ಸಕ್ಕರೆ ಉತ್ಪಾದನೆಯಲ್ಲಿ ಬಾಲ ಕಾರ್ಮಿಕ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕುವ ಅಗತ್ಯವಿದೆ ಎಂದರು.ರಾಜ್ಯದಲ್ಲಿ ವಿದೇಶಿ ಕಂಪನಿಗಳಾದ ನೆಸ್‌ಕೆಫೆ, ಕೊಕೊಕೊಲಾ, ಮಿಲ್ಕಿ ಬಾರ್ ಸೇರಿದಂತೆ ಉದ್ಯೋಗಾವಕಾಶ ಕಲ್ಪಿಸುವ ಹಲವು ಕಂಪನಿಗಳು ಸಕ್ಕರೆ ಆಮದು-ರಫ್ತು ವ್ಯವಹಾರಕ್ಕೆ ಸಹಕಾರ ನೀಡಲು ಐಎಲ್‌ಒ ಮೂಲಕ ಮುಂದಾಗುತ್ತಿರುವುದು ರಾಜ್ಯ ಹಾಗೂ ಬೆಳಗಾವಿ ಜಿಲ್ಲೆಗೆ ಉತ್ತಮ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಹಾಗೂ ಸಕ್ಕರೆ ಉತ್ಪಾದನೆ ಮಾಡುವ ಜಿಲ್ಲೆಗಳಲ್ಲಿ ಬೆಳಗಾವಿ ಪ್ರಮುಖವಾಗಿದ್ದು, ಜಿಲ್ಲೆಯ ಸಕ್ಕರೆಯನ್ನು ನೇರವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಲು ಕ್ರಮ ಕೈಗೊಳ್ಳಬೇಕಾದರೆ ಕಬ್ಬು ಬೆಳೆಯುವುದರಿಂದ ಹಿಡಿದು ಸಕ್ಕರೆ ತಯಾರಾಗುವವರೆಗೆ ಪ್ರತಿಯೊಂದು ಹಂತದಲ್ಲಿಯೂ ಮಕ್ಕಳನ್ನು ಬಳಸಿಕೊಳ್ಳದಿರುವುದು ಮುಖ್ಯವಾಗಿದೆ ಎಂದರು.ಬಾಲ ಕಾರ್ಮಿಕರಿಲ್ಲ ಎಂದು ಹೇಳಬಹುದು. ಆದರೆ, ವಾಸ್ತವದಲ್ಲಿ ಇನ್ನೂ ಬಾಲ ಕಾರ್ಮಿಕ ಪದ್ಧತಿ ಅಸ್ತಿತ್ವದಲ್ಲಿದೆ. ಪ್ರತಿಯೊಂದು ಕುಟುಂಬದ ಪರಿಸ್ಥಿತಿಯೂ ಒಂದೇ ರೀತಿಯಾಗಿರುವುದಿಲ್ಲ. ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಅವುಗಳು ತಮ್ಮ ಜೀವನ ನಿರ್ವಹಣೆ ಮಾಡುತ್ತವೆ ಎಂದು ತಿಳಿಸಿದರು.ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವುದು ಕಷ್ಟವಾಗಿದ್ದರೂ ಅದನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಾಲುದಾರ ಇಲಾಖೆ, ಸಂಘ, ಸಂಸ್ಥೆಗಳಿಂದ ಮಕ್ಕಳು ಬಾಲಕಾರ್ಮಿರು ಯಾಕಾಗುತ್ತಾರೆ ಎಂಬುದನ್ನು ಮುಂಚಿತವಾಗಿ ಗುರುತಿಸುವ ಕಾರ್ಯವಾಬೇಕು. ಆಗ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು.ಬಾಲಕಾರ್ಮಿಕ ವೇದಿಕೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ರಾಷ್ಟ್ರೀಯ ಯೋಜನಾ ಸಂಯೋಜಕ ರಂಜಿತ್ ಪ್ರಕಾಶ್ ಮಾತನಾಡಿ, ಸಧ್ಯದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಬಾಲ ಕಾರ್ಮಿಕರ ಬಳಕೆ ಹೆಚ್ಚಾಗುತ್ತಿದೆ. ಬಾಲ ಕಾರ್ಮಿಕರು ಆಗಬಹುದಾದಂತಹ ಮಕ್ಕಳನ್ನು ಗುರುತಿಸಬೇಕಾಗಿದೆ. ಈ ಕಾರ್ಯದಲ್ಲಿ ಪಾಲುದಾರ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಬಾಲಕಾರ್ಮಿಕ ಮುಕ್ತ ಜಿಲ್ಲೆ, ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಸಮುದಾಯಗಳ ಅಭಿವೃದ್ಧಿಗೆ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು. ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಕ್ಕರೆ ಕಾರ್ಖಾನೆಗಳು, ಇಟ್ಟಿಗೆ ಭಟ್ಟಿಗಳು, ಗಣಿಗಾರಿಕೆ ಸೇರಿದಂತೆ ಕಠಿಣ ಕೆಲಸಗಳಲ್ಲಿ ಮಕ್ಕಳು ತೊಡಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜ್ ಕೆ.ಬಿ ಮಾತನಾಡಿ, ಸರ್ಕಾರ, ಕಾರ್ಮಿಕರು ಹಾಗೂ ಉದ್ಯಮಿಗಳು ಒಟ್ಟಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಐಎಲ್ಒ ಸಹಕಾರ ನೀಡುತ್ತಿದೆ. ಬಾಲ ಕಾರ್ಮಿಕ ಮುಕ್ತ ವ್ಯವಸ್ಥೆ ನಿರ್ಮಾಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.ಭಾರತದಲ್ಲಿ ಬಾಲ ಕಾರ್ಮಿಕ ಮುಕ್ತ ವ್ಯವಸ್ಥೆ ನಿರ್ಮಿಸಲು ಕೇವಲ ಬಾಲ ಕಾರ್ಮಿಕರನ್ನು ಪತ್ತೆಹಚ್ಚಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ಸಾಕಾಗುವುದಿಲ್ಲ. ಅದರ ಬದಲಾಗಿ ಬಾಲ ಕಾರ್ಮಿಕ ಪದ್ಧತಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.ಬಾಲ ಕಾರ್ಮಿಕ ಮುಕ್ತ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ಬೆಳಗಾವಿ, ರಾಯಚೂರು, ಬಾಗಲಕೋಟೆ, ಚಿಕ್ಕಮಗಳೂರು ಹಾಗೂ ಕೊಡಗು ಸೇರಿದಂತೆ ಐದು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸಲು ಬಾಲ ಕಾರ್ಮಿಕರ ಬಳಕೆಯಿಲ್ಲದ ಕಾರ್ಖಾನೆಗಳು ಹಾಗೂ ಉತ್ಪಾದನಾ ವ್ಯವಸ್ಥೆಗಳನ್ನು ರೂಪಿಸುವುದು ಅಗತ್ಯವಾಗಿದೆ. ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವುದೇ ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಉಪ ಪೋಲಿಸ್ ಅಧೀಕ್ಷಕರಾದ ನಿರಂಜನ್, ಸಿಪಿಐ ನೇತ್ರಾವತಿ ಪಾಟೀಲ, ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ್ ಡಿ.ಜಿ., ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆ, ವಿವಿಧ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟಿಯು ವಿಸಿ ವಿದ್ಯಾಶಂಕರ್‌ ನೇಮಕ ಆದೇಶ ವಿಸ್ತರಣೆ ಪ್ರಶ್ನಿಸಿದ್ದ ಅರ್ಜಿ ವಜಾ
ಶಿಕ್ಷಕರಲ್ಲಿ ಸರಳತೆ, ಮಾನವೀಯತೆ, ವಾತ್ಸಲ್ಯಭಾವವಿರಲಿ