ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿ‍ಯು) ಕುಲಪತಿಯಾಗಿ ಎಸ್.ವಿದ್ಯಾಶಂಕರ್ ಅವರನ್ನು ನೇಮಕ ಮಾಡಿದ ಆದೇಶವನ್ನು ವಿಸ್ತರಿಸಿದ ರಾಜ್ಯಪಾಲರ ಕ್ರಮ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿ‍ಯು) ಕುಲಪತಿಯಾಗಿ ಎಸ್.ವಿದ್ಯಾಶಂಕರ್ ಅವರನ್ನು ನೇಮಕ ಮಾಡಿದ ಆದೇಶವನ್ನು ವಿಸ್ತರಿಸಿದ ರಾಜ್ಯಪಾಲರ ಕ್ರಮ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತು ನಾಗೇಶ್ವರರಾವ್ ತುಬಟಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಕುಲಪತಿ ನೇಮಕಾತಿಗಾಗಿ ರಚಿಸಲಾಗಿದ್ದ ಶೋಧನಾ ಸಮಿತಿಯಲ್ಲಿ ಯುಜಿಸಿ ಪ್ರತಿನಿಧಿ ಇರಲಿಲ್ಲ. ವಿದ್ಯಾಶಂಕರ್ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಸದ್ಭಾವನೆ ಇಲ್ಲದ ವ್ಯಕ್ತಿಯನ್ನು ಉನ್ನತವಾದ ಶೈಕ್ಷಣಿಕ ಹುದ್ದೆಯಲ್ಲಿ ಮುಂದುವರಿಸುವುದು ಸಲ್ಲ. ಅವರನ್ನು ಹುದ್ದೆಯಿಂದ ತೆರವುಗೊಳಿಸಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಆದರೆ, ಅವಧಿ ವಿಸ್ತರಣೆ ಸಂದರ್ಭದಲ್ಲಿ ಹೊಸದಾಗಿ ಅರ್ಜಿ ಆಹ್ವಾನಿಸಿ ಶೋಧನಾ ಸಮಿತಿ ರಚನೆ ಮಾಡಬೇಕೆಂಬ ನಿಯಮವೇನೂ ಇ‌ಲ್ಲ. ವಿದ್ಯಾಶಂಕರ್‌ ಅವರನ್ನು ಮೊದಲ ಬಾರಿಗೆ ನೇಮಕ ಮಾಡಿದಾಗ ಆ ನೇಮಕಾತಿಯನ್ನು ಪ್ರಶ್ನಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ವಿಷಯವನ್ನು ಪದೇ ಪದೇ ಶೋಧನೆಗೆ ಒಳಪಡಿಸುವ ಅಗತ್ಯ ಎದುರಾಗುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.ಮತ್ತೊಂದೆಡೆ ವಿಟಿಯು ಕುಲಪತಿ ಸ್ಥಾನಕ್ಕೆ ವಿದ್ಯಾಶಂಕರ್ ಅವರನ್ನು 2022ರಲ್ಲಿ ನೇಮಿಸಿದ ಮತ್ತು ಅವರ ಸೇವಾವಧಿಯನ್ನು 2025ರಲ್ಲಿ ವಿಸ್ತರಿಸಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಸಿ.ಬಿ.ಯೋಗೇಶ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ. ಈ ಎರಡು ಆದೇಶಗಳಿಂದ ಎಸ್.ವಿದ್ಯಾಶಂಕರ್ ಅವರ ವಿಟಿಯು ಕುಲಪತಿ ಸ್ಥಾನ ಅಬಾಧಿತವಾಗಲಿದೆ. ವಿದ್ಯಾಶಂಕರ್ ಅವರನ್ನು ವಿಟಿಯು ಕುಲಪತಿಯಾಗಿ 2022ರ ಸೆ.29 ರಂದು ಮೂರು ವರ್ಷಗಳಿಗೆ ನೇಮಕ ಮಾಡಿ ರಾಜ್ಯಪಾಲರು ಆದೇಶಿಸಿದ್ದರು. ಅವರ ಸೇವಾವಧಿಯನ್ನು ಮತ್ತೆ ಮೂರು ವರ್ಷಗಳಿಗೆ ವಿಸ್ತರಣೆ ಮಾಡಿ 2025ರ ಸೆ.3ರಿಂದ ಆದೇಶಿಸಿದ್ದರು.