ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಹಾಗೂ ಯುನೈಟೆಡ್ ಫೋರಂ ಆಫ್ ಗ್ರಾಮೀಣ ಬ್ಯಾಂಕ್ ಯೂನಿಯನ್ಸ್ ಸಂಘಟನೆಗಳ ಕರೆಯ ಮೇರೆಗೆ ಶುಕ್ರವಾರ ನಗರದ ಕೆನರಾ ಬ್ಯಾಂಕ್ ಮುಖ್ಯ ಶಾಖೆಯ ಮುಂಭಾಗದಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಮುಷ್ಕರ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಹಾಗೂ ಯುನೈಟೆಡ್ ಫೋರಂ ಆಫ್ ಗ್ರಾಮೀಣ ಬ್ಯಾಂಕ್ ಯೂನಿಯನ್ಸ್ ಸಂಘಟನೆಗಳ ಕರೆಯ ಮೇರೆಗೆ ಶುಕ್ರವಾರ ನಗರದ ಕೆನರಾ ಬ್ಯಾಂಕ್ ಮುಖ್ಯ ಶಾಖೆಯ ಮುಂಭಾಗದಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಮುಷ್ಕರ ನಡೆಸಲಾಯಿತು.ಬ್ಯಾಂಕ್ ನೌಕರರ ಮುಖಂಡ ಕಾಮ್ರೇಡ್ ಜಿ.ಜಿ.ಗಾಂಧಿ ಮಾತನಾಡಿ, ಕೇಂದ್ರ ಸರ್ಕಾರದ ಹಠಮಾರಿ ಧೋರಣೆಯಿಂದ ಈಗಾಗಲೇ 5 ದಿನಗಳ ಬ್ಯಾಂಕಿಂಗ್ ಜಾರಿಗಾಗಿ ಐಬಿಎ ಮತ್ತು ಯುಎಫ್‌ಬಿ ಒಪ್ಪಂದದಂತೆ ಕೇಂದ್ರ ಸರ್ಕಾರದ ವಿತ್ ಮಂತ್ರಾಲಯ/ ವಿತ್ ಸಚಿವರು ಸಮ್ಮತಿಸದೇ ವಿನಾಕಾರಣ ವಿಳಂಬ ಮಾಡುತ್ತಿದ್ಧಾರೆ. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕೆಲವೇ ಮೇಲಧಿಕಾರಿಗಳಿಗೆ ಲಾಭವಾಗುವಂತ ಪಿಎಲ್‌ಐ ಜಾರಿ ಮಾಡಿದೆ ಎಂದು ಆರೋಪಿಸಿದರು.
ಕಾಮ್ರೇಡ್ ಅಶೋಕ ಕಟ್ಟಿಮನಿ ಮಾತನಾಡಿ, 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ಎಲ್ಲ ವರ್ಗದ ನೌಕರರು ಮತ್ತು ಅಧಿಕಾರಿಗಳಿಗೆ ನ್ಯಾಯಸಮ್ಮತ ಹಾಗೂ ಸಮಾನ ಪಿಎಲ್‌ಐ ಯೋಜನೆ ಜಾರಿಗೊಳಿಸಬೇಕು. ಸರ್ಕಾರದ ಏಕಪಕ್ಷೀಯ ಧೋರಣೆ ಕೈಬಿಡಬೇಕು. ಇಲ್ಲವಾದಲ್ಲಿ ನಮ್ಮ ಪ್ರಮುಖ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ರಾಹುಲ್ ಪೋಳ, ಸುನಿಲ ನಾಯಕ, ಮುಕುಂದ ಜಳಕಿ, ಶ್ರೀಕಾಂತ, ಕವಿತಾ ಜಾಧವ, ಐಶ್ವರ್ಯ ವಡಾವಿ, ರಶ್ಮಿ ಕುಲಕರ್ಣಿ, ವೀಣಾ ಹೂಗಾರ, ಸೌಮ್ಯ ಕೋರಿ, ರೆಣುಕಾ ಕಟ್ಟಾನೀ, ಜಿಲ್ಲೆಯ ವಿವಿಧ ಬ್ಯಾಂಕ್‌ಗಳ 500ಕ್ಕೂ ಅಧಿಕ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.