ಬೇಸಿಗೆ ಶಿಬಿರ ಮತ್ತೊಂದು ಶಾಲೆಯಾಗದಿರಲಿ: ಆರ್.ಎಂ. ಶ್ಯಾಮ್ ರಾವ್ ಅಭಿಪ್ರಾಯ

KannadaprabhaNewsNetwork |  
Published : May 03, 2024, 01:09 AM IST
ಚಿತ್ರ:ನಗರದ ಹೊರವಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಚಿತ್ರದುರ್ಗದ ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಹತ್ತು ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರವನ್ನು ಬೆರಳಚ್ಚು ವಿದ್ಯಾ ಸಂಸ್ಥೆ ಪ್ರಾಂಶುಪಾಲ ಆರ್.ಎಂ. ಶ್ಯಾಮ್ ರಾವ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳಲ್ಲಿನ ಸೃಜನಶೀಲತೆ, ಕೌಶಲ ಹಾಗೂ ಕಲಿಕಾ ಮನೋಭಾವ ಹೆಚ್ಚಿಸಲು ಬೇಸಿಗೆ ಶಿಬಿರ ಅವಶ್ಯ. ಆದರೆ ಬೇಸಿಗೆ ಶಿಬಿರ ಮಕ್ಕಳಿಗೆ ಮತ್ತೊಂದು ಶಾಲೆಯಾಗಬಾರದು ಎಂದು ವಿಠ್ಠಲ ಬೆರಳಚ್ಚು ವಿದ್ಯಾ ಸಂಸ್ಥೆ ಪ್ರಾಂಶುಪಾಲ ಆರ್.ಎಂ. ಶ್ಯಾಮ್ ರಾವ್ ಹೇಳಿದರು.

ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ತುರುವನೂರು ರಸ್ತೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿರುವ ಹತ್ತು ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ಮಕ್ಕಳ ದಿನಚರಿ ಮೊಬೈಲ್‌, ಕಂಪ್ಯೂಟರ್‌ನಲ್ಲೇ ಕಳೆದು ಹೋಗುತ್ತದೆ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅತಿಯಾದ ಮೊಬೈಲ್‌ ಬಳಕೆಯಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಎದುರಾಗಬಹುದು. ಆ ಕಾರಣಕ್ಕೆ ಬೇಸಿಗೆ ಶಿಬಿರ ಉತ್ತಮ ಎಂದು ಅಭಿಪ್ರಾಯ ಪಟ್ಟರು.

ಮಕ್ಕಳಲ್ಲಿ ನಾಯಕತ್ವ ಗುಣ, ತಂಡಕ್ಕೆ ಮಾರ್ಗದರ್ಶನ ನೀಡುವ ಕೌಶಲವೂ ಅವರಲ್ಲಿ ತುಂಬಬೇಕು. ಈಗ ಬಹಳಷ್ಟು ಮಂದಿ ಬೇಸಿಗೆ ಶಿಬಿರಗಳನ್ನೂ ಸಹ ಹಣ ಮಾಡಿಕೊಳ್ಳುವ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ. ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉಚಿತ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳು ಸದುಪಯೋಗ ಪಡಿಸಿಕೊಂಡು ಶಿಬಿರದಲ್ಲಿ ಕಲಿಸಲಾಗುವ ವಿವಿಧ ರೀತಿ ಕಲೆ ಕಲಿತು ಉತ್ತಮ ಪ್ರಜೆಗಳಾಗಿ ಬೆಳೆಯುವಂತಾಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕಿ ಶೈಲಜಾ ರೆಡ್ಡಿ ಮಾತನಾಡಿ, ಶಿಬಿರಗಳಲ್ಲಿ ಮಕ್ಕಳಿಗೆ ಹೋಂವರ್ಕ್, ಟ್ಯೂಷನ್ ಎಂಬ ಒತ್ತಡಗಳು ಇಲ್ಲದೆ ಇರುವುದರಿಂದ ಮಕ್ಕಳು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಇದರಿಂದ ಮಕ್ಕಳಲ್ಲಿ ಮನೋಲ್ಲಾಸದ ಜೊತೆಗೆ ಹೊಸ ಪ್ರಯೋಗ ಮಾಡಲು ಆತ್ಮವಿಶ್ವಾಸ ಹೆಚ್ಚುತ್ತದೆ. ಹೊಸ ಸ್ನೇಹಿತರನ್ನು ಭೇಟಿಯಾದಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಲು ಬೇಸಿಗೆ ಶಿಬಿರ ಸಹಾಯ. ಬೇಸಿಗೆ ಶಿಬಿರದಲ್ಲಿನ ಮತ್ತೊಂದು ಬಹುಮುಖ್ಯ ಅನುಕೂಲ ಎಂದರೆ ಪ್ರಕೃತಿಯೊಂದಿಗೆ ಬೆರೆಯುವುದು. ಸದಾ ತಂತ್ರಜ್ಞಾನದ ನಡುವೆ ಬೆಳೆಯುವ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪ್ರಕೃತಿ ಮಧ್ಯೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಪ್ರಕೃತಿಯು ಎಲ್ಲಾ ಇಂದ್ರಿಯ ಪ್ರಚೋದಿಸುತ್ತದೆ. ಇದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.

ಸುಮಾರು 55ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ಶಿಬಿರವನ್ನು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗಿಡಕ್ಕೆ ನೀರೆರೆಯುವುದರೊಂದಿಗೆ ಪ್ರಾರಂಭಗೊಂಡಿತು. ಶಿಬಿರದಲ್ಲಿ ಬಾಲಗೋಕುಲದ ಮಾತಾ ನಾಗಲತಾರವರು ಹೇಳಿಕೊಟ್ಟ ಸ್ವಾಗತ ಗೀತೆಯೊಂದಿಗೆ ಪ್ರಾರಂಭಗೊಂಡು, ಶ್ರೀಮತಿ ನಿರ್ಮಲ ಗುರುವಂದನಾ ಹಾಡು, ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ ಶಿಕ್ಷಕ ತಿಪ್ಪೇರುದ್ರಪ್ಪ ಹೇಳಿಕೊಟ್ಟ ಅಬಾಕಸ್ ಮಕ್ಕಳಿಗೆ ಖುಷಿನೀಡಿದವು. ಶಿಬಿರದ ಆಯೋಜಕ ರವಿ ಅಂಬೇಕರ್ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ಈ ಸಂಧರ್ಭದಲ್ಲಿ ಸಂಪನ್ಮೂಲ ‌ವ್ಯಕ್ತಿಗಳಾದ ನೃತ್ಯ ಕಲಾವಿದೆ ಕು.ಗಗನ, ಭಜನೆ ಹಾಡುಗಾರ್ತಿ ಶ್ರೀಮತಿ ಅಂಬುಜಾಕ್ಷಿ, ನಳಿನಾಕ್ಷಿ, ಚೈತ್ರ, ಶಿಕ್ಷಕಿ ರೇಣುಕಾ, ಸುನೀತಾ, ಇನ್ನಿತರರು ಭಾಗವಹಿಸಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''