ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪಾಲಕರಾಗಿಯೂ ಸೇವೆ ಸಲ್ಲಿಸಬೇಕು.
ಕನ್ನಡಪ್ರಭ ವಾರ್ತೆ ಹಳಿಯಾಳ
ವಿದ್ಯಾರ್ಥಿಗಳು ಮನೆಯಲಿದ್ದಕ್ಕಿಂತ ಹೆಚ್ಚಿನ ಸಮಯವನ್ನು ಶಾಲೆಯಲ್ಲಿಯೇ ಕಳೆಯುತ್ತಿರುವುದರಿಂದ ವಿದ್ಯಾರ್ಥಿಗಳೊಂದಿಗೆ ನಿಮ್ಮ ಒಡನಾಟ ಜಾಸ್ತಿಯಾಗಿರುತ್ತದೆ. ಅದಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪಾಲಕರಾಗಿಯೂ ಸೇವೆ ಸಲ್ಲಿಸಬೇಕು, ಇದು ನಿಮ್ಮ ನೈತಿಕ ಜವಾಬ್ದಾರಿಯೂ ಹೌದು ಎಂದು ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ದಾಂಡೇಲಿಯ ಕಾಗದ ಕಾರ್ಖಾನೆಯ ಸಿಎಸ್ಆರ್ ನಿಧಿಯಿಂದ ನವೀಕರಣಗೊಂಡ ಬಿಇಒ ಕಾರ್ಯಾಲಯದ ಲೋಕಾರ್ಪಣೆ ಹಾಗೂ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ನೀಡಿದ ಪ್ರೌಢಶಾಲೆಗಳ ಮುಖ್ಯೋಧ್ಯಾಪಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತರಾದ ನಂತರವು ಗೌರವ ಅಭಿಮಾನದಿಂದ ಸಮಾಜವು ಕಾಣುವ ಏಕೈಕ ಹುದ್ದೆಯು ಶಿಕ್ಷಕ ವೃತ್ತಿಯಾಗಿದೆ. ಶಿಕ್ಷಕ ವೃತ್ತಿಯು ಪವಿತ್ರವಾದ ಹುದ್ದೆಯಾಗಿದ್ದು, ನೀವೆಲ್ಲರೂ ಪುಣ್ಯವಂತರು ಎಂದರು. ಶಿಕ್ಷಕರಿಗೆ ಸರ್ಕಾರವು ಯಾವುದನ್ನೂ ಕಡಿಮೆ ಮಾಡಲಿಲ್ಲ ಎಂದ ದೇಶಪಾಂಡೆ, ಉತ್ತಮ ಶಿಕ್ಷಣವನ್ನು ನೀಡುವುದು ನಿಮ್ಮ ಕರ್ತವ್ಯವಾಗಿದೆ ಎಂದರು.
ಬಿಇಒ ಪ್ರಮೋಧ ಮಹಾಲೆ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಾಲಯದ ನವೀಕರಣ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
ತಾಪಂ ಇಒ ವಿಲಾಸರಾಜ್ ಪ್ರಸನ್ನ, ದಾಂಡೇಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ತಿವಾರಿ, ಸಿಎಸ್ಆರ್ ವಿಭಾಗದ ಹಿರಿಯ ಅಧಿಕಾರಿ ಜಿ.ಆರ್. ರಾಘವೇಂದ್ರ, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿರಶಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಸತೀಶ ನಾಯ್ಕ್ ಬಾವಕೇರಿ, ತಾಲೂಕ ಅಧ್ಯಕ್ಷ ಪ್ರಶಾಂತ ನಾಯ್ಕ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಉದಯ ನಾಯ್ಕ, ಮಂಜು ಗುನಗಾ, ವೆಂಕಟೇಶ್ ನಾಯ್ಕ, ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಂಗೂಬಾಯಿ, ದಿನೇಶ್ ನಾಯ್ಕ ಇದ್ದರು.
ಆಶಾ ದೇಶಭಂಡಾರಿ ಹಾಗೂ ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.