ಶಿವಾನಂದ ಗೊಂಬಿ

ಹುಬ್ಬಳ್ಳಿ:

ಚಿಕ್ಕಮಕ್ಕಳ ಹೃದಯಾಘಾತದ ಕಾರಣಗಳ ಬಗ್ಗೆ ಇತ್ತೀಚಿಗಷ್ಟೇ ಸಂಶೋಧನೆ ನಡೆಸಿದ್ದ ಇಲ್ಲಿನ ಕೆಎಂಸಿಆರ್‌ಐ, ಇದೀಗ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ರೈತರಿಗೆ ಕಿಡ್ನಿ ವೈಫಲ್ಯ, ಹೃದ್ರೋಗಕ್ಕೆ ತುತ್ತಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ಕೆಲ ಆಘಾತಕಾರಿ ಅಂಶಗಳನ್ನು ಬಯಲು ಮಾಡಿದೆ.

ರಸಗೊಬ್ಬರ, ಕ್ರಿಮಿನಾಶಕ ಬಳಕೆ ಬಗ್ಗೆ ಪರ-ವಿರೋಧ ಚರ್ಚೆಗಳು ಮೊದಲಿನಿಂದಲೇ ನಡೆಯುತ್ತಲೇ ಇವೆ. ಇವೆಲ್ಲದರ ನಡುವೆಯೇ ಇವುಗಳನ್ನು ಸಿಂಪಡಿಸುವ ರೈತರ ದೇಹದ ಮೇಲೆ ಏನು ಪರಿಣಾಮ ಬೀರುತ್ತಿವೆ ಎಂಬುದರ ಕುರಿತು ಕೆಎಂಸಿಆರ್‌ಐನ ಬಹುಶಿಸ್ತೀಯ ಅಧ್ಯಯನ ಘಟಕವು ಧಾರವಾಡ ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ಸಂಶೋಧನೆ ನಡೆಸಿದೆ.

ಏನಿದು ಸಂಶೋಧನೆ:


ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ 13 ರೈತರನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದ ಕೆಎಂಸಿಆರ್‌ಐ, ಕ್ರಿಮಿನಾಶಕ ಹಾಗೂ ರಸಗೊಬ್ಬರ ಸಿಂಪಡಿಸಿದ ರೈತರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಸಿಂಪಡಣೆಯ ಮೊದಲ ದಿನದಿಂದ ಹಿಡಿದು 15 ದಿನದ ಬಳಿಕವೂ ರೈತರ ರಕ್ತದಲ್ಲಿ ಕ್ರಿಮಿನಾಶಕದ ಅಂಶ ಪತ್ತೆಯಾಗಿದೆ. ರೈತರ ದೇಹಕ್ಕೆ ರಾಸಾಯನಿಕ ಹೇಗೆ ಪ್ರವೇಶಿಸುತ್ತದೆ ಮತ್ತು ದೀರ್ಘಕಾಲದಲ್ಲಿ ಅದರ ಪರಿಣಾಮ ಏನಾಗಬಹುದು ಎಂಬುದರ ಕುರಿತು ಮತ್ತಷ್ಟು ಅಧ್ಯಯನ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವ ಪರಿಣಾಮ?:

ಕ್ರಿಮಿನಾಶಕಗಳ ಸಂಪರ್ಕದಿಂದ ರೈತರ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮೂತ್ರಪಿಂಡ, ಹೃದಯ ಹಾಗೂ ಚಯಾಪಚಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಗಮನ ಅಗತ್ಯವಿದೆ. ಕಿಡ್ನಿ ವೈಫಲ್ಯ, ಮಧುಮೇಹ ಅಥವಾ ಹೃದಯ ಕಾಯಿಲೆಗೆ ರಸಗೊಬ್ಬರ, ಕ್ರಿಮಿನಾಶಕವೂ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಇದೇ ನೇರ ಕಾರಣ ಎಂದು ಈ ಸಣ್ಣ ಪ್ರಮಾಣದ ಅಧ್ಯಯನದಿಂದ ಅಂತಿಮವಾಗಿ ಹೇಳಲು ಸಾಧ್ಯವಿಲ್ಲ. ದೊಡ್ಡ ಪ್ರಮಾಣದ ಮತ್ತು ದೀರ್ಘಾವಧಿಯ ಸಂಶೋಧನೆ ಅಗತ್ಯವಿದೆ ಎಂದು ವೈದ್ಯರ ತಂಡ ಅಭಿಪ್ರಾಯಪಟ್ಟಿದೆ.

ದೇಹಕ್ಕೆ ಸೇರುತ್ತಿರುವುದೇಗೆ?

ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳದಿದ್ದರೆ, ಉಸಿರಾಟ ಹಾಗೂ ಚರ್ಮದ ಸಂಪರ್ಕದ ಮೂಲಕ ರಾಸಾಯನಿಕಗಳು ದೇಹಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಸಿಂಪಡಣೆ ಮಾಡುವಾಗ ರೈತರು ಕಡ್ಡಾಯವಾಗಿ ಸುರಕ್ಷತಾ ಸಾಧನ ಬಳಸಬೇಕು. ಮುಖಕ್ಕೆ ಸೂಕ್ತ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸುವ ಜತೆಗೆ ದೇಹವನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಬಳಸಬೇಕು. ಸಿಂಪಡಣೆ ಮಾಡುವ ಸಂದರ್ಭದಲ್ಲಿ ಆಹಾರ ಅಥವಾ ನೀರು ಸೇವಿಸಬಾರದು. ಯಾರೊಂದಿಗೂ ಮಾತನಾಡಬಾರದು. ಸಿಂಪಡಣೆ ಮುಗಿದ ಬಳಿಕ ಕೈ, ಮುಖ ಹಾಗೂ ದೇಹವನ್ನು ಚೆನ್ನಾಗಿ ತೊಳೆಯಬೇಕು. ಬಟ್ಟೆಗಳಿಗೂ ರಾಸಾಯನಿಕ ತಗುಲಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಬೇಕು ಎಂದು ಅಧ್ಯಯನ ಸಲಹೆ ಮಾಡುತ್ತದೆ.

ದೊಡ್ಡ ಮಟ್ಟದ ಅಧ್ಯಯನ:

ಸದ್ಯ ಧಾರವಾಡ ಜಿಲ್ಲೆಯಲ್ಲಷ್ಟೇ ಅದು ಬರೀ 13 ರೈತರ ಅಧ್ಯಯನವನ್ನಷ್ಟೇ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮುಂದಿನ ಹಂತದಲ್ಲಿ ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆ ನಿಲ್ಲಿಸುವುದು ಅಸಾಧ್ಯ. ಆದರೆ, ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದನ್ನು ತಪ್ಪಿಸಬೇಕು. ಸಿಂಪಡಣೆ ವೇಳೆ ಸುರಕ್ಷತಾ ಕ್ರಮ ಪಾಲಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡು ಪರಿಹಾರ ಸೂಚಿಸುವುದು ಅಧ್ಯಯನದ ಮುಖ್ಯ ಉದ್ದೇಶ ಎಂದು ಕೆಎಂಸಿಆರ್‌ಐ ತಿಳಿಸುತ್ತದೆ.

ಒಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆ ರೈತರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿರುವುದಂತೂ ಸತ್ಯ.ಒಂದು ತಿಂಗಳ ಅವಧಿಯಲ್ಲಿ 13 ರೈತರ ರಕ್ತದ ಮಾದರಿ ಪಡೆದು ಪರೀಕ್ಷಿಸಲಾಗಿದೆ. ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿದ ಮೊದಲ ದಿನದಿಂದ ಹಿಡಿದು 15 ದಿನದವರೆಗೂ ರಕ್ತದಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿವೆ. ಈ ಬಗ್ಗೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಗ ಇನ್ನಷ್ಟು ನಿಖರತೆ ಪಡೆಯಬಹುದು.

ಡಾ. ರಾಮ ಕೌಲಗುಡ್ಡ, ನೋಡಲ್‌ ಅಧಿಕಾರಿ, ಬಹುಶಿಸ್ತೀಯ ಅಧ್ಯಯನ ವಿಭಾಗ, ಕೆಎಂಸಿಆರ್‌ಐ