ಧಾರವಾಡ:
ಶಿಕ್ಷಣವು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು ಶಿಕ್ಷಣದಿಂದ ಮಾತ್ರ ತಾಯಿ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕಬಲ್ಲಳು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.ನಗರದ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಹಾಗೂ ಸುಶೀಲ ಮುರಿಗೆಪ್ಪ ಶೇಷಗಿರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ "ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಕೇವಲ ಪದವಿ ಪಡೆಯುವುದೇ ಜೀವನದ ಗುರಿ ಅಲ್ಲ. ಶಿಕ್ಷಣ ಎಂದರೆ ತಮ್ಮೊಳಗಿನ ಅರಿವಿನ ವಿಸ್ತಾರ ಮಾಡಿಕೊಳ್ಳುವುದಾಗಿದೆ ಎಂದರು.
ಶಿಕ್ಷಣವು ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿಸುವುದು. ಮಹಿಳಾ ಶಿಕ್ಷಣವು ಇಡೀ ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿಗೆ ಕಾರಣವಾಗಿದೆ. ಒಬ್ಬ ಗಂಡು ಓದಿದರೆ ಒಬ್ಬ ವ್ಯಕ್ತಿ ಓದಿದಂತೆ, ಅದೇ ಒಂದು ಹೆಣ್ಣು ಓದಿದರೆ ಇಡೀ ಕುಟುಂಬವೇ ಸುಶಿಕ್ಷಿತವಾಗಲು ಸಾಧ್ಯ. ಶಿಕ್ಷಿತ ತಾಯಿ ಮಾತ್ರ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯ ಎಂದು ಹೇಳಿದರು.ಪ್ರಸೂತಿ ಹಾಗೂ ಹೆರಿಗೆ ತಜ್ಞೆ ಡಾ. ಗೀತಾ ಭರತ್ ಉತ್ತೂರ, `ಮಹಿಳೆ: ಶಿಕ್ಷಣ ಆರೋಗ್ಯ’ ಕುರಿತು ಉಪನ್ಯಾಸ ನೀಡಿ, ಮಹಿಳೆಯರು ಕುಟುಂಬ ನಿರ್ವಹಣೆ ಭರದಲ್ಲಿ ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ. ನೀವು ಆರೋಗ್ಯವಂತರಾದರೆ ಮಾತ್ರ ಏನನ್ನಾದರೂ ಸಾಧನೆ ಮಾಡಬಹುದು. ಇಂದಿನ ಸಮಯದಲ್ಲಿ ಬಹುತೇಕ ಮಹಿಳೆಯರಲ್ಲಿ ರಕ್ತಹೀನತೆ, ಖಿನ್ನತೆ, ಸುಸ್ತು, ಥೈರಾಯ್ಡ್ ಅಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಋತು ಚಕ್ರದ ಅಸಮತೆಯೂ ಒಂದು ಗಂಭೀರ ಸಮಸ್ಯೆ. ಸಮತೋಲನ ಆಹಾರ ಸೇವನೆ ದೈಹಿಕ ಚಟುವಟಿಕೆ ಮೂಲಕ ಮಹಿಳೆ ಆರೋಗ್ಯ ಪೂರ್ಣ ಜೀವನ ಸಾಗಿಸಬಹುದು. ಮೇಲಿಂದ ಮೇಲೆ ಆರೋಗ್ಯ ತಪಾಸಣೆಯೂ ಬಹಳ ಮುಖ್ಯ ಎಂದು ಹೇಳಿದರು.
ಆಡಳಿತ ಮಂಡಳಿ ಸದಸ್ಯರಾದ ಡಾ. ಜೆ.ಎಂ. ನಾಗಯ್ಯ, ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಮಾತನಾಡಿದರು. ಪ್ರಾಚಾರ್ಯರಾದ ಪ್ರೊ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಪರಿಚಯಿಸಿದರು. ಚೇತನ ಎಂ.ವಿ. ನಿರೂಪಿಸಿದರು. ಡಾ. ದತ್ತಾ ಕಾಮಕರ ವಂದಿಸಿದರು.