ಕುಂದಗೋಳ:
ಪಡಿತರ ಸಾಗಿಸುವ ವಾಹನಗಳ ಗುತ್ತಿಗೆದಾರರು ಪಡಿತರವನ್ನು ಸುರಕ್ಷಿತವಾಗಿ ಸಾಗಿಸಬೇಕೆಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನೆಹರು ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.ತಾಲೂಕು ಪಂಚಾಯಿತಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಹಿರೇನೇರ್ತಿ ಹಾಗೂ ಯರಗುಪ್ಪಿ ಗ್ರಾಮಗಳಿಗೆ ಸಾಗಿಸುವ ವಾಹನ ಚಾಲಕನ ನಿರ್ಲಕ್ಷ್ಯದಿಂದ ವಿತರಿಸಬೇಕಿದ್ದ ಜೋಳದ ಚೀಲಗಳು ರಸ್ತೆಯಲ್ಲಿ ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ಬಿದ್ದಿದ್ದ ಚೀಲಗಳ ಪೈಕಿ ಮಣ್ಣು ಪಾಲಾದ ಅಥವಾ ಮಿಶ್ರಣವಾದ ಧಾನ್ಯದ ಚೀಲಗಳು ಎಲ್ಲಿಗೆ ಹೋದವು ಎಂಬುದರ ಕುರಿತು ಪರಿಶೀಲನೆ ನಡೆಸಬೇಕು. ಈ ಕುರಿತು ಪಡಿತರ ಅಂಗಡಿ ಮಾಲೀಕರು, ಗೋದಾಮು ಉಸ್ತುವಾರಿ ಅಧಿಕಾರಿಗಳು ಹಾಗೂ ಸಾರಿಗೆ ಲಾರಿ ಮಾಲೀಕರ ತುರ್ತು ಸಭೆ ಕರೆದು ಸೂಕ್ತ ತಿಳಿವಳಿಕೆ ನೀಡಬೇಕು. ಧಾನ್ಯ ಸಾಗಣೆ ವೇಳೆ ಯಾವುದೇ ರೀತಿಯ ನಿರ್ಲಕ್ಷ್ಯವಾಗದಂತೆ ಕ್ರಮಕೈಗೊಂಡು, ತಪ್ಪಿತಸ್ಥರ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಹರ್ಲಾಪುರ ಹಾಗೂ ಸುಲ್ತಾನಪೂರ ಗ್ರಾಮಗಳಿಗೆ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಹಿರೆಗುಂಜಳ ಗ್ರಾಮದ ಬಳಿ ಅಪಾಯಕಾರಿ ಹಂತದಲ್ಲಿ ಬಾಗಿರುವ ವಿದ್ಯುತ್ ಕಂಬಗಳನ್ನು ತಕ್ಷಣ ದುರಸ್ತಿಪಡಿಸಬೇಕು ಎಂದು ಹೆಸ್ಕಾಂ ಇಲಾಖಾಧಿಕಾರಿಗಳಿಗೆ ಪಾಟೀಲ ತಾಕೀತು ಮಾಡಿದರು.ಸಿಡಿಪಿಒ ಅಧಿಕಾರಿ ಉಮಾ ಬಳ್ಳೊಳ್ಳಿ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿ ಯೋಜನೆಯ ಫಲಾನುಭವಿಗಳಲ್ಲಿ ಹಲವರ ಇ-ಕೆವೈಸಿ ಇನ್ನೂ ಅಪ್‌ಡೇಟ್ ಆಗದಿರುವುದು ಸಭೆಯ ಗಮನಕ್ಕೆ ಬಂದಿತು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಯಲ್ಲಪ್ಪಗೌಡ ಪಾಟೀಲ, ಚಂದ್ರಶೇಖರ ಸೋಮರೆಡ್ಡಿ, ಶಂಕ್ರಪ್ಪ ಹಡಪದ, ಅಡಿವೆಪ್ಪ ಹೆಬಸೂರ, ಅಬ್ದುಲ್ ಖಾದರ, ಜಿಲಾನಿ ಬಾಬಕ್ಕನವರ, ನಾಗರಾಜ ಕೋಟೆಯಣ್ಣವರ, ಸಿದ್ದಲಿಂಗಪ್ಪ ಕರೆಯಮ್ಮನವರ, ಯಲ್ಲಪ್ಪ ಶಿಂಗಣ್ಣವರ, ವೆಂಕಣ್ಣ ಸಂಶಿ, ಪರಶುರಾಮ ಹರಿಜನ ಹಾಗೂ ಬಾಬುಜಾನ ಹಾಜಿಸಾಬನವರ ಸಭೆಯಲ್ಲಿದ್ದರು.