ಶಿಕ್ಷಕರು ವೃತ್ತಿಯ ಘನತೆ ಅರಿತು ಬೋಧಿಸಲಿ: ಶಾಸಕ ದೇಶಪಾಂಡೆ

KannadaprabhaNewsNetwork |  
Published : Nov 22, 2024, 01:17 AM IST
ಕಾರ್ಯಕ್ರಮವನ್ನು ಶಾಸಕ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿಕ್ಷಕರು ಮಕ್ಕಳಲ್ಲಿ ಅವರ ಭವ್ಯ ಭವಿಷ್ಯದ ಬಗ್ಗೆ ಕನಸನ್ನು ಬಿತ್ತಬೇಕು. ಕನಸನ್ನು ನನಸನ್ನಾಗಿಸಲು ಅವರಲ್ಲಿ ಅವರನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಅಣಿಗೊಳಿಸಬೇಕು.

ಹಳಿಯಾಳ: ಶಿಕ್ಷಕ ವೃತ್ತಿ ಪೂಜ್ಯನೀಯ, ಗೌರವಯುತ ಸೇವೆಯಾಗಿದೆ. ಅದಕ್ಕಾಗಿ ಶಿಕ್ಷಕರು ತಮ್ಮ ವೃತ್ತಿಯ ಘನತೆಯನ್ನು ಅರಿತು ಸೇವೆ ಸಲ್ಲಿಸಬೇಕೇ ಹೊರತು ಇದೊಂದು ನೌಕರಿ, ಉದ್ಯೋಗವೆಂಬ ವಿಚಾರ ಅವರ ಚಿಂತನೆಯಲ್ಲೂ ಬರಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಗುರುವಾರ ಪಟ್ಟಣದ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ- 2024ಕ್ಕೆ ಚಾಲನೆ ನೀಡಿ ಮಾತನಾಡಿ, ಯಾರಿಗೇ ಸರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸಲು ಆಗುವುದಿಲ್ಲವೋ, ಜವಾಬ್ದಾರಿಯನ್ನು ನಿಭಾಯಿಸಲು ಆಗುವುದಿಲ್ಲವೋ, ಅವರು ದಯವಿಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದರು.ತಮ್ಮ ಮಕ್ಕಳಿಗೆ ವಿದ್ಯೆ ನೀಡಲು ತೋರುವ ಕಾಳಜಿಯನ್ನು ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹೊಂದಿರಬೇಕು. ಮಕ್ಕಳಿಗೆ ಬರೀ ಶಿಕ್ಷಕರಾಗದೇ ಅವರ ಪಾಲಕರ ತಂದೆ- ತಾಯಿಯ ಸ್ಥಾನದಲ್ಲಿದ್ದುಕೊಂಡು ಬೋಧಿಸಿದರೆ ಶಿಕ್ಷಣದ ಗುಣಮಟ್ಟ ವೃದ್ಧಿಯಾಗುವುದೆಂದರು.ಶಿಕ್ಷಕರು ಮಕ್ಕಳಲ್ಲಿ ಅವರ ಭವ್ಯ ಭವಿಷ್ಯದ ಬಗ್ಗೆ ಕನಸನ್ನು ಬಿತ್ತಬೇಕು. ಕನಸನ್ನು ನನಸನ್ನಾಗಿಸಲು ಅವರಲ್ಲಿ ಅವರನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಅಣಿಗೊಳಿಸಬೇಕು ಎಂದರು.ಕೇವಲ ಸಿಲೆಬಸ್ ಆಧರಿತ ಶಿಕ್ಷಣ ನೀಡಿದರೇ ಸಾಲದು. ಅದರ ಜತೆ ಸಾಮಾನ್ಯ ಜ್ಞಾನ, ಉತ್ತಮ ನಡವಳಿಕೆಗಳು, ಮಾನವೀಯ ಮೌಲ್ಯಗಳು, ಚಾರಿತ್ರ್ಯ ನಿರ್ಮಾಣದಂಥ ಉತ್ತಮ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು ಎಂದರು.ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಮೂಲ ಸೌಲಭ್ಯ, ಹಲವಾರು ಶೈಕ್ಷಣಿಕ ಸವಲತ್ತು ನೀಡಿದರೂ, ಖಾಸಗಿ ಶಾಲೆಗಳಲ್ಲಿರುವಂತಹ ಶಿಸ್ತು ಸರ್ಕಾರಿ ಶಾಲೆಗಳಲ್ಲಿ ಹಾಗೂ ಅಲ್ಲಿನ ಮಕ್ಕಳಲ್ಲಿ ಕಂಡುಬರುವುದಿಲ್ಲ. ಇದು ಏಕೆ ಎಂದು ದೇಶಪಾಂಡೆ ಪ್ರಶ್ನಿಸಿದರು.ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆಗಳತ್ತ ತಮ್ಮ ಮಕ್ಕಳನ್ನು ದಾಖಲು ಮಾಡಲು ಪಾಲಕರು ಯಾಕೆ ಒಲವು ತೋರುತ್ತಿದ್ದಾರೆ ಎಂಬುದರ ಬಗ್ಗೆ ಶಿಕ್ಷಕ ವೃಂದ ಹಾಗೂ ಶಿಕ್ಷಣ ಕ್ಷೇತ್ರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಇಂತಹ ಬೃಹತ್ ವೇದಿಕೆಯನ್ನು ಕಲ್ಪಿಸಲು ಪ್ರತಿಭಾ ಕಾರಂಜಿಯೆಂಬ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪರಿಚಯಿಸಿತು. ಪ್ರತಿಭಾ ಕಾರಂಜಿಯ ಮೂಲಕ ಉತ್ತಮ ಕಲಾವಿದರು, ಗಾಯಕರು ಹೊರಹೊಮ್ಮಬೇಕು. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕೆ ಹೊರತು ಪ್ರತಿಭಾ ಕಾರಂಜಿಗಳು ಕಾಟಾಚಾರದ ಕಾರ್ಯಕ್ರಮಗಳಾಗಬಾರದು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದಲ್ಲಿ ಒಟ್ಟು 527 ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಇಒ ಸತೀಶ್ ಆರ್., ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್ ನಾಯಕ, ಬಿಆರ್‌ಸಿ ಕೇಂದ್ರದ ಸಂಯೋಜಕಿ ಎಂ.ಎಸ್. ಚೌಗಲಾ, ಪ್ರಶಾಂತ ನಾಯಕ, ಸುರೇಶ ನಾಯಕ, ಗೋಪಾಲ ತೊರ್ಲೆಕರ, ಜಾಕೀರ ಜಂಗೂಬಾಯಿ, ಸುಲೇಮಾನ ಶೇಖ್, ಲಕ್ಷ್ಮಣ ಕುಕಡೊಳ್ಳಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ