ಧಾರವಾಡ: ಭಾರತದ ಕೃಷಿ ಜಲ ಸಂಕಟ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಮತ್ತು ಎಐ ಸಹಯೋಗದೊಂದಿಗೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕೃಷಿಕರಿಗೆ ನೆರವಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಕರ್ನಾಟಕ ಸರ್ಕಾರ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ₹50 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಿದೆ. ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದೆ. ಕೃಷಿ ನವೋದ್ಯಮಗಳನ್ನು ಉತ್ತೇಜಿಸುತ್ತಿದೆ. ಅಲ್ಲದೆ, ಅಂತಹ ಉದ್ಯಮಗಳಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಮೂಲಕ ಆರ್ಥಿಕ ನೆರವು ನೀಡುತ್ತಿದೆ ಎಂದು ತಿಳಿಸಿದರು.
ರಾಜ್ಯದ ಉತ್ಪಾದನೆ ಹೆಚ್ಚಿಸಲು ಹನಿ ನೀರಾವರಿ ಯೋಜನೆಗೆ ಕಳೆದ ಎರಡು ವರ್ಷದಲ್ಲಿ ₹ 1075 ಕೋಟಿ ಸಹಾಯಧನ ನೀಡಲಾಗಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ಭೂಮಿ ಹದಗೊಳಿಸುವುದರಿಂದ ಕಟಾವು ಹಾಗೂ ಸಂಸ್ಕರಣೆಯ ವರೆಗೂ ಯಂತ್ರೋಪಕರಣಗಳಿಗಾಗಿ ಕಳೆದ ಎರಡು ವರ್ಷದಲ್ಲಿ ₹ 900 ಕೋಟಿ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.ಕೋಯ್ಲೋತ್ತರ ತಂತ್ರಜ್ಞಾನಗಳ ಬಳಕೆಗೆ ಸರ್ಕಾರ ಹಾರ್ವೆಸ್ಟರ್ ಹಬ್ ಯೋಜನೆ ಜಾರಿಗೆ ತಂದು ಕಳೆದ ಎರಡು ವರ್ಷಗಳಲ್ಲಿ ಒಟ್ಟು 344 ಹೈಟೆಕ್ ಹಾರ್ವೆಸ್ಟರ್‌ಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. 2023-24ನೇ ಸಾಲಿನಲ್ಲಿ ಕೃಷಿಭಾಗ್ಯ ಯೋಜನೆ ಮರು ಜಾರಿಗೊಳಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 25,158 ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ ನೀರನ್ನು ಸಂಗ್ರಹಿಸಿ, ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷಗಳ ಯೋಜನೆಗಳಿಗೆ ₹235 ಕೋಟಿ ಸಹಾಯಧನ ನೀಡಲಾಗಿದೆ. ಅಲ್ಲದೆ, ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಸಮನ್ವಯತೆ ತರಲು ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂದು ಹೇಳಿದರು.