ಕಡೂರುದೇವಸ್ಥಾನಗಳು ಸಮಾನತೆ, ಧರ್ಮ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೇಂದ್ರಗಳಾಗಬೇಕೇ ಹೊರತು ಕೇವಲ ಪೂಜಾ ಸ್ಥಳಗಳಾಗಿ ಉಳಿಯಬಾರದು ಎಂದು ಕಾಗಿನೆಲೆ ಕನಕಗುರು ಪೀಠದ ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಹೇಳಿದರು.
ಶಿವಾನಂದಪುರಿ ಸ್ವಾಮೀಜಿ ಪ್ರತಿಪಾದನೆ । ಕಂಸಾಗರದಲ್ಲಿ ಕರಿಯಮ್ಮ ದೇವಾಲಯದ ಲೋಕಾರ್ಪಣೆ, ಧಾರ್ಮಿಕ ಸಮಾರಂಭ
ಕನ್ನಡಪ್ರಭ ವಾರ್ತೆ, ಕಡೂರುದೇವಸ್ಥಾನಗಳು ಸಮಾನತೆ, ಧರ್ಮ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೇಂದ್ರಗಳಾಗಬೇಕೇ ಹೊರತು ಕೇವಲ ಪೂಜಾ ಸ್ಥಳಗಳಾಗಿ ಉಳಿಯಬಾರದು ಎಂದು ಕಾಗಿನೆಲೆ ಕನಕಗುರು ಪೀಠದ ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಹೇಳಿದರು.ತಾಲೂಕಿನ ಕಂಸಾಗರ ಗ್ರಾಮದಲ್ಲಿ ಸೋಮವಾರ ಕರಿಯಮ್ಮ ದೇವಾಲಯದ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಕಲ್ಲಿನಿಂದ ದೇವಸ್ಥಾನ ನಿರ್ಮಿಸಿ ಭಕ್ತಿ ಅಭಿವ್ಯಕ್ತಿಪಡಿಸುವುದು ಧಾರ್ಮಿಕ ಮನೋಭಾವನೆ ಪ್ರತೀಕ. ಇಂತಹ ಧಾರ್ಮಿಕ ಕೇಂದ್ರಗಳು ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಲು ಸಹಕಾರಿಯಾಗುತ್ತವೆ. ಸಣ್ಣಪುಟ್ಟ ಗಲಾಟೆ, ವೈಮನಸ್ಸು ಉಂಟಾದಾಗ ನ್ಯಾಯಾಲಯದ ಮೆಟ್ಟಿಲೇರುವ ಬದಲು ಸ್ಥಳೀಯ ವಾಗಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗದೆ ನ್ಯಾಯ ಮತ್ತು ಸಾಮರಸ್ಯದ ಕೇಂದ್ರಗಳಾಗಬೇಕು ಎಂದು ತಿಳಿಸಿದರು.ಕಾಲ ಬದಲಾದಂತೆ ಮಾನವನ ಜೀವನಶೈಲಿಯೂ ಬದಲಾಗುತ್ತಿದೆ. ಆದರೆ ಹಿರಿಯರು ಅನುಸರಿಸಿದ ಧರ್ಮದ ಹಾದಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಸಂಸ್ಕೃತಿ ಹಿರಿಮೆ ಅರಿತು ಅದನ್ನು ಉಳಿಸಿ ಬೆಳೆಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಧಾರ್ಮಿಕ ನೆಲೆಗಟ್ಟಿನ ಮೇಲೆ ನಮ್ಮ ಜೀವನ ರೂಪು ಗೊಂಡಿದೆ. ದೇವಸ್ಥಾನಗಳು ನಮ್ಮ ಮನಸ್ಸಾಕ್ಷಿ ಮತ್ತು ಪ್ರಜ್ಞೆಯನ್ನು ಜಾಗೃತಗೊಳಿಸುವ ತಾಣಗಳಾಗಬೇಕು. ಕಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದಿಗೆ ದೇವಸ್ಥಾನಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ₹21 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.ಚಿಕ್ಕಮಗಳೂರು ರಸ್ತೆ-ಕಂಸಾಗರ ಮಾರ್ಗದಲ್ಲಿ ಮೇಲ್ಸೇತುವೆ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸುಮಾರು ₹2 ಕೋಟಿ ಅನುದಾನ ನೀಡಲಾಗಿದೆ. ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು ಎಂದರು.ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಮಕ್ಕಳಿಗೆ ಮೊಬೈಲ್ ನೀಡುವುದಕ್ಕಿಂತ ನಮ್ಮ ಧಾರ್ಮಿಕ ಪರಂಪರೆ, ದಾರ್ಶನಿಕರ ತತ್ವಾದರ್ಶಗಳನ್ನು ಪರಿಚಯಿಸಲು ಪೋಷಕರು ಮುಂದಾಗಬೇಕು ಎಂದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ದೇವಸ್ಥಾನಗಳನ್ನು ನಿರ್ಮಿಸುವುದಷ್ಟೇ ನಮ್ಮ ಜವಾಬ್ದಾರಿ ಯಲ್ಲ. ಅವುಗಳ ಮೂಲಕ ಧಾರ್ಮಿಕ ನಂಬಿಕೆ, ಸಂಸ್ಕೃತಿ, ಆಚಾರ-ವಿಚಾರ ಹಾಗೂ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾ, ಶಿಕ್ಷಣ ಮತ್ತು ಸಂಸ್ಕಾರ ಒಂದಕ್ಕೊಂದು ಪೂರಕ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ ಎಂದರು.ಈ ಸಂದರ್ಭದಲ್ಲಿ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ದೇವಾಲಯದ ಕಳಸಾರೋಹಣ ನೆರವೇರಿಸಿದರು. ಬಳಿಕ ಗ್ರಾಮದಲ್ಲಿರುವ ಶ್ರೀ ಕನಕದಾಸರ ಪ್ರತಿಮೆ ಪುನರ್ ಪ್ರತಿಷ್ಠಾಪನೆ ನಡೆಯಿತು.ಟ್ರಸ್ಟ್ ಅಧ್ಯಕ್ಷ ಗೋಪಿನಾಥ್ ಹಾಗೂ ಗ್ರಾಮದ ಮುಖಂಡ ದೇಪುರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ.ಎನ್.ಬೊಮ್ಮಣ್ಣ, ಕಂಸಾ ಗರ ರೇವಣ್ಣ, ಕೆ.ಎಸ್.ಕೃಷ್ಣಮೂರ್ತಿ, ಡಿ.ನಾಗರಾಜ್, ಕಂಸಾಗರ ರಘು, ಹಳೇಪೇಟೆ ತಿಪ್ಪೇಶ್, ಡಿ.ಹರೀಶ್, ಕೆ.ರವಿ ಕುಮಾರ್, ದಿನೇಶ್, ಗಂಗಾಧರ್, ಕೆ.ಎಂ.ಮಂಜುನಾಥ್, ಎಂ.ಪರಮೇಶ್ವರಪ್ಪ, ಹನುಮಂತಪ್ಪ, ಕೆ.ಕೆ.ಸುನೀಲ್, ಕೆ.ಎಂ.ಶ್ರೀನಿವಾಸ್, ಸವಿತಾ ರಮೇಶ್, ಸಾಗರ್ ಜಗದೀಶ್, ಚೇತನ್ ಕೆಂಪರಾಜು ಮತ್ತಿತರರು ಇದ್ದರು.ಫೋಟೋ:
ಕಡೂರು ತಾಲೂಕಿನ ಕಂಸಾಗರ ಗ್ರಾಮದಲ್ಲಿ ಕರಿಯಮ್ಮ ದೇವಾಲಯದ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.