ಕನ್ನಡಪ್ರಭ ವಾರ್ತೆ ತಿಪಟೂರು
ಸಾಧಕರ ಸಾಧನೆಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪ್ರೇರಣೆಯನ್ನಾಗಿಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಸಾಧನೆಯ ಹಾದಿ ಸುಲಭವಾಗಲಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು, ಸಾಮಾಜಿಕ ಹರಿಕಾರ ಡಿ. ದೇವರಾಜ ಅರಸು ಹಾಗೂ ಮಾಜಿ ಮುಖ್ಯಮಂತ್ರಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ನಡೆದ ಪ್ರಬಂಧ ಹಾಗೂ ಭಾಷಣ ಮಂಡನಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ವಿದ್ಯಾರ್ಥಿಗಳಲ್ಲಿ ಮೊದಲು ಹಠ, ಛಲ, ಪ್ರಾಮಾಣಿಕ ಪರಿಶ್ರಮ, ಶ್ರದ್ಧೆ ಇದ್ದರೆ ಗೆಲುವಿನ ಹಾದಿ ಸುಗಮವಾಗಲಿದೆ. ಸಾಧಿಸಬೇಕಾದರೆ ಅಡೆತಡೆಗಳು ಸಾಕಷ್ಟು ಎದುರಾಗುವುದು ಸಾಮಾನ್ಯ, ಅವುಗಳನ್ನು ಧೈರ್ಯದಿಂದ ಮೆಟ್ಟಿ ನಿಲ್ಲಬೇಕು. ಬಡತನದಲ್ಲಿ ಹುಟ್ಟಿ ಗ್ರಾಮೀಣ ಭಾಗಗಳಿಂದ ಬಂದ ಎಷ್ಟೋ ಜನರು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹವರನ್ನು ವಿದ್ಯಾರ್ಥಿಗಳು ರೋಲ್ ಮಾಡೆಲ್‌ಗಳನ್ನಾಗಿ ಸ್ವೀಕರಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಕೆ.ಎಸ್.ಎಸ್, ಐಎಎಸ್‌ನಂತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈಗಿನಿಂದಲೇ ನೀವು ಸಿದ್ಧರಾಗಬೇಕು. ಶಿಕ್ಷಣದ ಜೊತೆಗೆ ಕೌಶಲ್ಯ, ಪಠ್ಯೇತರ ವಿಷಯಗಳತ್ತ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.ಸಕಾರಾತ್ಮಕ ಚಿಂತನೆ, ವಿವೇಕ, ವಿವೇಚನೆ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಸಮಾಜ ತಿದ್ದುವ ವ್ಯಕ್ತಿಗಳಾಗಬೇಕು. ಕಷ್ಟಪಟ್ಟು ನಿಮಗೆ ಶಿಕ್ಷಣ ಕೊಡಿಸುತ್ತಿರುವ ತಂದೆ- ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಅವರ ಆಸೆ, ಆಕಾಂಕ್ಷೆಗಳನ್ನು ಈಡೇರಿಸಬೇಕೆಂದ ಅವರು, ತಿಪಟೂರು ಕಲ್ಪತರು ನಾಡಾಗಿದ್ದು, ತೆಂಗಿಗೆ ಪ್ರಸಿದ್ಧಿಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ನೀವು ತೆಂಗು ಕೈಗಾರಿಕಾ ಘಟಕ ತೆರೆದು ಹತ್ತಾರು ಜನರಿಗೆ ಉದ್ಯೋಗ ನೀಡಬಹುದು. ಇದಕ್ಕೆ ಸರ್ಕಾರದಿಂದ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ಎಲ್ಲರಲ್ಲಿಯೂ ಜ್ಞಾನ ಸಂಪಾದಿಸುವ ಶಕ್ತಿಯಿದ್ದು, ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ವಿಫಲವಾಗುವುದಿಲ್ಲ. ಸಾಧನೆ ಮಾಡಿ ಸಮಾಜಕ್ಕೆ ನಿಮ್ಮಿಂದೇನಾದರೂ ಕೊಡುಗೆ ನೀಡಿ, ಸಮಾಜವೇ ನಿಮ್ಮತ್ತ ತಿರುಗುವಂತೆ ಮಾಡಬೇಕೆಂದರು.ಶ್ರೀ ನಾರಾಯಣ ಗುರು, ಡಿ. ದೇವರಾಜ ಅರಸು, ರಾಜೀವ್ ಗಾಂಧಿ ಇವರ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಲೋಕನಾಥ ಸಿಂಗ್, ಟೈಮ್ಸ್ ಕಾಲೇಜಿನ ಪ್ರಮೋದ್, ಕಲ್ಪತರು ಪಿಯು ಕಾಲೇಜಿನ ವೆಂಕಟೇಶ್, ಕ್ರೋಮ್ ಕಾಲೇಜಿನ ಬಸವರಾಜು, ದೈಹಿಕ ಶಿಕ್ಷಣ ಉಪನ್ಯಾಸಕ ಷಡಕ್ಷರಪ್ಪ, ಭೈರೇಶ್, ಮೈಲಾರಪ್ಪ, ಮಾಲ, ಹರೀಶ್ ಸೇರಿ ವಿವಿಧ ಕಾಲೇಜುಗಳ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.