ವಿವಾದಿತ ಭೂಮಿಯಲ್ಲಿ ಅಧ್ಯಯನ ಕೇಂದ್ರ ನಿರ್ಮಿಸಲು ಮುಂದಾಗಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಹೋರಾಟಗಾರ ನಾಗೇಂದ್ರ ದಂಡೆ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ವಿವಾದಿತ ಭೂಮಿಯಲ್ಲಿ ಅಧ್ಯಯನ ಕೇಂದ್ರ ನಿರ್ಮಿಸಲು ಮುಂದಾಗಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಹೋರಾಟಗಾರ ನಾಗೇಂದ್ರ ದಂಡೆ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಬೀದರ್ ನಗರದಿಂದ ಸುಮಾರು 13 ಕಿ.ಮೀ. ದೂರದ ಅತಿವಾಳ ಗ್ರಾಮದ ಸರ್ವೆ ನಂಬರ್ 1ರ ವ್ಯಾಪ್ತಿಯಲ್ಲಿ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ಮಿಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುಣವಾಗಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ನಿರ್ಮಿಸುವ ಉದ್ದೇಶಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕಳೆದ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬದುಕುತ್ತಿರುವ ಬಡ ರೈತರ ಜಮೀನನ್ನು ಕಸಿದುಕೊಂಡು ಈ ಕೇಂದ್ರ ನಿರ್ಮಿಸುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಉದ್ದೇಶಿತ ಜಮೀನಿನ ಪೈಕಿ 14 ಜನ ರೈತರಿಗೆ ಈ ಹಿಂದೆ ಸಾಗುವಳಿ ಚೀಟಿ (ಸಿ-ಫಾರಂ) ನೀಡಲಾಗಿದ್ದು, ರೈತರ ಜಮಿನು ಕಬಳಿಸಿ ಅಧ್ಯಯನ ಕೇಂದ್ರ ನಿರ್ಮಿಸುವುದು ಎಷ್ಟರ ಮಟ್ಡಿಗೆ ಸರಿ? ಎಂದು ಪ್ರಶ್ನೆ ಮಾಡಿದರು.
50 ವರ್ಷಗಳಿಂದ ಉಳುಮೆ:
ಒಟ್ಟು 75 ಎಕರೆ 35 ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ ಸೇರಿದಂತೆ ವಿವಿಧ ಸಮುದಾಯಗಳ 14 ಬಡ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು. 1994ರಲ್ಲಿ ಅಧಿಕೃತವಾಗಿ ಸಿ-ಫಾರಂ ಸಾಗುವಳಿ ಚೀಟಿ ವಿತರಿಸಲಾಗಿದೆ ಎಂದು ತಿಳಿಸಿದರು.
ಸತ್ತ ವ್ಯಕ್ತಿಗೆ ನೋಟಿಸ್, ನಕಲಿ ಸಹಿ ಆರೋಪ:
2011ರಲ್ಲಿ ಸ್ಥಳೀಯ ರಾಜಕೀಯ ಪ್ರಭಾವದಿಂದ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ರೈತರ ಸಾಗು ವಳಿ ಚೀಟಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆದಿತ್ತು ಎಂಬ ಆರೋಪವಿದೆ. 2006ರಲ್ಲಿಯೇ ಮೃತಪಟ್ಟಿದ್ದ ಚೆನ್ನಪ್ಪ ಎಂಬು ವವರ ಹೆಸರಿಗೆ 2011ರಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಅವರ ಹೆಸರಿನಲ್ಲಿ ಬೇರೊಬ್ಬರ ಹೆಬ್ಬೆಟ್ಟಿನ ಗುರುತು ಹಾಗೂ ಸಹಿ ಬಳಸಿಕೊಂಡು ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ಹೈಕೋರ್ಟ್‌ನಲ್ಲಿ ಪ್ರಕರಣ:
ಉದ್ದೇಶಿತ ಜಮೀನಿನ ಹಕ್ಕು ಸಂಬಂಧ ಹೈಕೋರ್ಟ್‌ನಲ್ಲಿ ಮೂರು ರಿಟ್ ಅರ್ಜಿಗಳು ಸೇರಿದಂತೆ ಹಲವು ಪ್ರಕರಣಗಳು ವಿಚಾರಣೆಯಲ್ಲಿವೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಜಿಲ್ಲಾಡಳಿತ ಕಾಮಗಾರಿ ಆರಂಭಿಸಲು ಮುಂದಾಗಿರುವುದು ವಿಪರ್ಯಾಸ ಎಂದರು.
ಸಾಲೋಮನ್, ಅತಿವಾಳ ಸಂತ್ರಸ್ತ ರೈತರಾದ ಶಿವರಾಜ ಹುಲೆಪ್ಪ, ಬಸಯ್ಯ ಸ್ವಾಮಿ, ಶಾಮಸನ್ ಬಕ್ಕಪ್ಪ, ಹಣಮಂತ ಧೋಬಿ, ಈರಪ್ಪ ರಂಜೇರಿ, ಚನ್ನಬಸವ ಡೋಣಗಾಂವೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.