- ಪ್ರತಿ ಜಿಲ್ಲೆಯಲ್ಲೂ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳ ಉತ್ಪಾದನೆ: ಕೈಮಗ್ಗ-ಜವಳಿ ಇಲಾಖೆ ಜಂಟಿ ನಿರ್ದೇಶಕಿ ಡಿ.ಸುಮಲತಾ- - -
ಭಾರತದ ಟೆಕ್ಸ್ಟೈಲ್ ರಫ್ತನ್ನು 2030ರ ಒಳಗಾಗಿ 100 ಬಿಲಿಯನ್ ಯುಎಸ್ ಡಾಲರ್ಗೆ ತಲುಪಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರಫ್ತು ಉತ್ತೇಜನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ತುಮಕೂರು ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕಿ ಡಿ.ಸುಮಲತಾ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಗುರುವಾರ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜವಳಿ ರಫ್ತು ಉದ್ದಿಮೆದಾರರಿಗಾಗಿ ಹಮ್ಮಿಕೊಂಡಿದ್ದ ಪ್ರೋತ್ಸಾಹಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಜವಳಿ ಉತ್ಪನ್ನಗಳ ರಫ್ತಿನಲ್ಲಿ ರಾಜ್ಯವು ಪ್ರಸ್ತುತ 6ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಲಾಗಿದೆ ಎಂದರು.ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ಉದ್ಯಮಿಗಳಿಗೆ ರಫ್ತು ಪ್ರಕ್ರಿಯೆ ಕುರಿತು ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಕರ್ನಾಟಕ ಸಮೃದ್ಧ ಪರಂಪರೆಯ ರಾಜ್ಯವಾಗಿದ್ದು, ಇಲ್ಲಿ ಉತ್ಪನ್ನಗಳಿಗೆ ಯಾವುದೇ ಕೊರತೆಯಿಲ್ಲ. ಪ್ರತಿ ಜಿಲ್ಲೆಯಲ್ಲೂ ಅತ್ಯುತ್ತಮ ಗುಣಮಟ್ಟದ ಉತ್ಪನ್ನ ಉತ್ಪಾದನೆ ಆಗುತ್ತಿವೆ. ಅಂತಹ ಉತ್ಪಾದನೆಗಳಿಗೆ ಸೂಕ್ತ ಪ್ರೋತ್ಸಾಹ, ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಇಲಾಖೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಒಂದು ಕಾಲದಲ್ಲಿ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತಿ ಪಡೆದಿತ್ತು. ಹಲವಾರು ಜವಳಿ ಮಿಲ್ ಇದ್ದವು. ಕಾಲಕ್ರಮೇಣ ಅವೆಲ್ಲಾ ಸ್ಥಗಿತಗೊಂಡಿವೆ. ಎಲ್ಲರ ಪ್ರಯತ್ನದಿಂದ ಮತ್ತೆ ಆ ವೈಭವ ಮರುಕಳಿಸಬೇಕು. ಸರ್ಕಾರ ಹಾಗೂ ಇಲಾಖೆಯಿಂದ ಈ ಉದ್ಯಮಕ್ಕೆ ಇರುವಂತಹ ಸಾಲ ಸೌಲಭ್ಯ ಪಡೆದುಕೊಂಡು, ಆರ್ಥಿಕ ಉದ್ಯಮದಲ್ಲಿ ಯಶಸ್ವಿಯಾಗಿ ಬೆಳೆಯಬೇಕು ಎಂದು ಹೇಳಿದರು.
ದೇಶದಲ್ಲೇ ಉತ್ಪನ್ನ ಮಾರುವುದಕ್ಕಿಂತ, ವಿದೇಶಗಳಿಗೆ ರಫ್ತು ಮಾಡುವುದರಿಂದ ಯುರೋ ಅಥವಾ ಡಾಲರ್ ರೇಟ್ನಲ್ಲಿ ಹೆಚ್ಚು ಹಣ ಗಳಿಸಬಹುದು. ಹೆಚ್ಚಿನ ಲಾಭ ಗಳಿಸಲು ಅವಕಾಶ ಇರುತ್ತದೆ. ಕೃಷಿ ನಂತರ ಎಂ.ಎಸ್.ಎಂ.ಇ. ಕ್ಷೇತ್ರವೇ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದ್ದು, ಅದರಲ್ಲಿ ಜವಳಿ ಉದ್ಯಮದ ಪಾತ್ರ ಅತ್ಯಂತ ದೊಡ್ಡದಾಗಿದೆ. ಮನೆ ಮನೆಗೂ ಉದ್ಯಮವನ್ನು ಸ್ಥಾಪಿಸಬಹುದಾದ ಕ್ಷೇತ್ರ ಇದಾಗಿದೆ ಎಂದು ಅವರು ತಿಳಿಸಿದರು.
ಸ್ಥಳೀಯವಾಗಿಯೇ ಸೌಲಭ್ಯ ಪಡೆದುಕೊಳ್ಳಬಹುದು. ಅಂಚೆ ಕಚೇರಿಗಳ ಮುಖಾಂತರ 50 ಕೆ.ಜಿ.ವರೆಗೆ (ಸೀರೆಗಳು, ಡ್ರೆಸ್ ಮೆಟೀರಿಯಲ್ ಇತ್ಯಾದಿ) ವಿದೇಶಗಳಿಗೆ ಸುಲಭವಾಗಿ ರಫ್ತು ಮಾಡುವ ಅವಕಾಶವಿದೆ. ಜವಳಿ ಇಲಾಖೆಯಿಂದ ಅಗತ್ಯ ಎಲ್ಲ ತಾಂತ್ರಿಕ ಹಾಗೂ ಕಾನೂನು ಮಾರ್ಗದರ್ಶನ ಒದಗಿಸಲು ಸದಾ ಸಿದ್ಧವಿದ್ದೇವೆ. ಉದ್ಯಮಿಗಳು ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
100 ಅಧಿಕ ಜವಳಿ ಉದ್ದಿಮೆದಾರರು ಭಾಗವಹಿಸಿದ್ದರು. ಕೆನರಾ ಜಿಎಸ್ಟಿ, ಲಘು ಉದ್ಯಮಿ ಕ್ರೆಡಿ ಟ್ ಕಾರ್ಡ್, ಮಹಿಳಾ ವಿಕಾಸ ಹಾಗೂ ಕೆನರಾ ಎಂಎಸ್ಎಂಇ ಸುಗಮ್ ಮುಂತಾದ ವಿಶೇಷ ಸಾಲ ಯೋಜನೆ ಬಗ್ಗೆಯೂ ವಿವರಿಸಲಾಯಿತು.
-12ಕೆಡಿವಿಜಿ5: ದಾವಣಗೆರೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜವಳಿ ರಫ್ತು ಉದ್ದಿಮೆದಾರರಿಗಾಗಿ ಹಮ್ಮಿಕೊಂಡಿದ್ದ ಪ್ರೋತ್ಸಾಹಕ ಕಾರ್ಯಾಗಾರವನ್ನು ತುಮಕೂರು ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕಿ ಡಿ.ಸುಮಲತಾ ಉದ್ಘಾಟಿಸಿದರು.