ಕಲೆಗಳು ಸಮಕಾಲೀನ ವಿಚಾರಗಳಿಗೆ ಸ್ಪಂದಿಸಲಿ

KannadaprabhaNewsNetwork |  
Published : Feb 10, 2025, 01:48 AM IST

ಸಾರಾಂಶ

ಸಾಂಪ್ರದಾಯಿಕ ಕಲೆಗಳು ಸಮಕಾಲೀನ ವಿಚಾರಗಳಿಗೆ ಸ್ಪಂದಿಸಲಿ. ಅದು ಅವುಗಳ ಸಾಮಾಜಿಕ ಹೊಣೆಗಾರಿಕೆ. ಆಗ ಅವು ಮೌಲ್ಯಗಳ ಪ್ರಸಾರದೊಂದಿಗೆ ಸಾಮಾಜಿಕ ಅಭಿವೃದ್ಧಿಗೂ ಕೊಡುಗೆ ನೀಡಿದಂತಾಗುತ್ತದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾಂಸ ಡಾ. ಲಕ್ಷ್ಮಣದಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಾಂಪ್ರದಾಯಿಕ ಕಲೆಗಳು ಸಮಕಾಲೀನ ವಿಚಾರಗಳಿಗೆ ಸ್ಪಂದಿಸಲಿ. ಅದು ಅವುಗಳ ಸಾಮಾಜಿಕ ಹೊಣೆಗಾರಿಕೆ. ಆಗ ಅವು ಮೌಲ್ಯಗಳ ಪ್ರಸಾರದೊಂದಿಗೆ ಸಾಮಾಜಿಕ ಅಭಿವೃದ್ಧಿಗೂ ಕೊಡುಗೆ ನೀಡಿದಂತಾಗುತ್ತದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾಂಸ ಡಾ. ಲಕ್ಷ್ಮಣದಾಸ್ ಹೇಳಿದರು.

ಯಕ್ಷದೀವಿಗೆ ಸಂಸ್ಥೆಯು ನಗರದ ಕನ್ನಡ ಭವನದಲ್ಲಿ ಪ್ರಸ್ತುತಪಡಿಸಿದ ವಿನೂತನ ಯಕ್ಷಗಾನ ಪ್ರಸಂಗ ಚಂದ್ರಮಂಡಲಚರಿತೆಯ ಪ್ರಥಮ ಪ್ರಯೋಗ ಉದ್ಘಾಟಿಸಿ ಮಾತನಾಡಿದರು.

ಭೂಮಿಯ ಸಂಪನ್ಮೂಲಗಳನ್ನು ನಾವು ಮಾತ್ರ ಬಳಸಿಕೊಂಡರೆ ಸಾಲದು. ಮುಂದಿನ ತಲೆಮಾರಿಗೆ ಸಂಪನ್ಮೂಲಗಳು ಉಳಿಯಬೇಕು. ಸುಸ್ಥಿರತೆಯನ್ನು ಸಾಧಿಸಬೇಕಾದರೆ ಪ್ರಗತಿಯ ಜೊತೆ ಜೊತೆಗೆ ಸಮಕಾಲೀನ ಚಿಂತನೆಗಳೂ ಮೇಳೈಸಬೇಕು. ಯಕ್ಷದೀವಿಗೆ ಸಂಸ್ಥೆಯೂ ಹೊಸದಾಗಿ ಸಂಯೋಜಿಸಿ ರಂಗಕ್ಕೆ ತಂದಿರುವ ಚಂದ್ರಮಂಡಲಚರಿತೆ ಯಕ್ಷಗಾನವು ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ. ವಿಶಿಷ್ಟ, ವೈಚಾರಿಕ ಅಂಶಗಳು ಇದರ ಕಥಾಹಂದರದಲ್ಲಿವೆ. ನಾಳೆಗೆ ಉಳಿಯಲಿ ನೆಲ, ಜಲ ಎಂಬ ಇದರ ಆಶಯವೇ ವಿನೂತನವಾಗಿದೆ ಎಂದರು.

ಯಕ್ಷಗಾನ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಅದನ್ನು ಬಯಲುಸೀಮೆಯಲ್ಲಿ ಪರಿಚಯಿಸುತ್ತಿರುವ ಯಕ್ಷದೀವಿಗೆ ತಂಡದ ಪ್ರಯತ್ನ ಪ್ರಶಂಸಾರ್ಹ ಎಂದರು. ಕೈಗಾರಿಕೋದ್ಯಮಿ ಡಾ.ಎಚ್. ಜಿ. ಚಂದ್ರಶೇಖರ್ ಮಾತನಾಡಿ, ಸಮಾಜದಲ್ಲಿ ಮೌಲ್ಯಪ್ರತಿಪಾದನೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಯಕ್ಷಗಾನ ಅಂತಹ ಕೆಲಸವನ್ನು ಶತಮಾನಗಳಿಂದ ಮಾಡಿಕೊಂಡು ಬರುತ್ತಿದೆ. ಈ ಕಲೆಯ ಮೂಲಕ ಸಮಕಾಲೀನ ಅಗತ್ಯದ ವಿಚಾರವನ್ನು ಸಮಾಜದಲ್ಲಿ ಪಸರಿಸಲು ಸಾಧ್ಯವಾಗಿರುವುದು ಅಭಿನಂದನೀಯ ಎಂದರು.

ಚಂದ್ರಮಂಡಲಚರಿತೆಯನ್ನು ರಚಿಸಿದ ಹಿರಿಯ ಯಕ್ಷಗಾನ ಕಲಾವಿದ, ಸಾಹಿತಿ ಗಣರಾಜ ಕುಂಬ್ಳೆಯವರನ್ನು ಸನ್ಮಾನಿಸಲಾಯಿತು. ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆಯವರ ನಿರ್ದೇಶನದ ಯಕ್ಷಗಾನ ಪ್ರದರ್ಶನವನ್ನು ಹ್ಯುಂಡೈ ಮೋಟಾರ್ ಇಂಡಿಯಾ ಫೌಂಡೇಶನ್‌ನ ಆರ್ಟ್ ಫಾರ್ ಹೋಪ್ 2025 ಯೋಜನೆಯಡಿಯಲ್ಲಿ ಏರ್ಪಡಿಸಲಾಗಿತ್ತು.

ತುಮಕೂರು ವಿಶ್ವವಿದ್ಯಾನಿಲಯದ ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಸಿಂಡಿಕೇಟ್ ಸದಸ್ಯ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ಜಿ. ಪರಶುರಾಮ ಯಕ್ಷಗಾನಕ್ಕೆ ಪ್ರತಿಕ್ರಿಯೆ ನೀಡಿದರು. ದಕ್ಷಿಣ ಕನ್ನಡ ಮಿತ್ರವೃಂದ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಮರನಾಥ ಶೆಟ್ಟ ಕೆಂಜೂರು ಮನೆ, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪ್ರಿಯಾ ಪ್ರದೀಪ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌