ಹಾವೇರಿ: ಉಜ್ವಲ ಪರಂಪರೆ ಮತ್ತು ವಿಶಿಷ್ಟವಾದ ಇತಿಹಾಸವನ್ನು ಲಿಂಗಾಯತ ಬಣಜಿಗ ಸಮಾಜ ಹೊಂದಿದ್ದು, ಮಕ್ಕಳ ವಿದ್ಯಾಭ್ಯಾಸದ ಜತೆಗೆ ಸಮಾಜಕ್ಕೆ ಅವಶ್ಯಕತೆ ಇರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬಣಜಿಗ ಸಮಾಜ ಸಂಘಟಿತರಾಗಿರುವುದು ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪ್ರಸ್ತುತ ಎಲ್ಲ ಜಾತಿಯ ಒಳಪಂಗಡಗಳು ತಮ್ಮ ಪಂಗಡದ ಸಂಘಗಳನ್ನು ರಚಿಸಿಕೊಂಡು ಅವರ ಒಳಿತಿಗಾಗಿ ಪ್ರಯತ್ನಿಸುತ್ತಿವೆ. ಬಣಜಿಗ ಸಮಾಜವು ಲಿಂಗಾಯತ ಇತರ ಒಳಪಂಗಡಗಳ ಹಾಗೂ ಇತರ ಜಾತಿ-ಧರ್ಮಗಳ ಜತೆಗೆ ಉತ್ತಮ ಹಾಗೂ ಸೌಹಾರ್ದಯುತ ಬಾಂಧವ್ಯವನ್ನು ಇರಿಸಿಕೊಂಡು ಸಾಮರಸ್ಯದಿಂದ ಬದುಕುವ ಸಮಾಜವಾಗಿದೆ. ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಸಮಾಜದ ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದಿರುವ ಜನರಿಗೆ ಸಹಾಯಹಸ್ತ ನೀಡಬೇಕು. ಅಲ್ಲದೇ ಈ ಸಂಘದಿಂದ ಕಾಲಕಾಲಕ್ಕೆ ರಚನಾತ್ಮಕ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಅಜಿತ ಮಾಗಾವಿ ಮಾತನಾಡಿ, ಎಲ್ಲ ಜಾತಿ, ಧರ್ಮಗಳ ಒಳಪಂಗಡಗಳ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಜತೆಗೆ ಬಣಜಿಗ ಸಮಾಜ ಬಾಂಧವರನ್ನು ಸಂಘಟಿಸಿ ಅವಶ್ಯಕತೆ ಇರುವ ಬೇಡಿಕೆ ಈಡೇರಿಸಿಕೊಳ್ಳುವುದು ಸಂಘದ ಮೂಲ ಉದ್ದೇಶವಾಗಿದೆ. ಎಲ್ಲರ ಸಹಕಾರ, ಮಾರ್ಗದರ್ಶನ ಅವಶ್ಯಕ ಎಂದರು.ಸಂಘದ ಅಧ್ಯಕ್ಷ ಕಿರಣ ಕೊಳ್ಳಿ ಮಾತನಾಡಿ, ಸಂಘದ ಮೂಲ ಉದ್ದೇಶ ಮತ್ತು ಮುಂಬರುವ ದಿನಗಳಲ್ಲಿ ಕಾಲಕಾಲಕ್ಕೆ ರಚನಾತ್ಮಕ ಕಾರ್ಯಗಳನ್ನು ಸಂಘದಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.
ಅಕ್ಷರಾ ಮುಳಗುಂದ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕೋರಿ ವಂದಿಸಿದರು.ಪದಾಧಿಕಾರಿಗಳ ಪದಗ್ರಹಣ: ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾಗಿ ಅಜಿತ ಮಾಗಾವಿ, ಅಧ್ಯಕ್ಷರಾಗಿ ಕಿರಣ ಕೊಳ್ಳಿ, ಉಪಾಧ್ಯಕ್ಷರಾಗಿ ಕೆ.ಸಿ. ಪಾವಲಿ, ಶಿವಕುಮಾರ ಮುದುಗಲ್, ದಯಾನಂದ ಯಡ್ರಾಮಿ, ನಿರಂಜನ ಹೆರೂರ, ಕಾರ್ಯದರ್ಶಿಯಾಗಿ ಬಸವರಾಜ ಕೋರಿ, ಗಿರೀಶ ಶೆಟ್ಟರ್, ಖಜಾಂಚಿಯಾಗಿ ಶಿವಲಿಂಗೇಶ ಗುಂಜೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯಕುಮಾರ ಕೂಡ್ಲಪ್ಪನವರ, ಮಲ್ಲಿಕಾರ್ಜುನ ಹಿಂಚಿಗೇರಿ, ಪ್ರವೀಣ ಶೆಟ್ಟರ, ಮುರುಘೇಶ ಬಾಲೇಹೊಸೂರ, ಶಿವಬಸಪ್ಪ ಚೌಶೆಟ್ಟಿ, ಶಿವಣ್ಣ ಶೆಟ್ಟರ, ಸಲಹಾ ಸಮಿತಿ ಸದಸ್ಯರಾಗಿ ಪ್ರಭುಗೌಡ ಬಸನಗೌಡ್ರ, ನಾಗರಾಜ ವಿಭೂತಿ, ಮಾಂತಣ್ಣ ಮಾಸೂರ, ವಿಜಯಕುಮಾರ ಚಿನ್ನಿಕಟ್ಟಿ, ಸಿದ್ದಲಿಂಗಪ್ಪ ಮಹಾರಜಪೇಟ ಪದಗ್ರಹಣ ಮಾಡಿದರು.