ಮಹದಾಯಿ ಯೋಜನೆ ಬಗ್ಗೆ ಬಿಜೆಪಿಯವರು ಸತ್ಯ ಹೇಳಲಿ: ಎಸ್‌.ಆರ್. ಪಾಟೀಲ್

KannadaprabhaNewsNetwork | Published : Apr 11, 2024 12:48 AM

ಸಾರಾಂಶ

ನರಗುಂದ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ಮಾತನಾಡಿದರು.

ನರಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಬಗ್ಗೆ ಬಿಜೆಪಿಯವರು ಈ ಭಾಗದ ರೈತರಿಗೆ ಸತ್ಯ ಹೇಳಬೇಕು. ಯೋಜನೆ ಜಾರಿಯಲ್ಲಿ ಯಾರಿಂದ ನಿರ್ಲಕ್ಷ್ಯ ಆಗಿದೆ ಎಂಬುದನ್ನು ತಿಳಿಸಬೇಕು ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು. ಅವರು ಬುಧವಾರ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಹೊಳೆಆಲೂರ, ನರಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮಹದಾಯಿ ಯೋಜನೆ ಹೆಸರು ಹೇಳಿಕೊಂಡು ಬಿಜೆಪಿಯವರು ಮಲಪ್ರಭ ಅಚ್ಚುಕಟ್ಟು ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದರು. ನರಗುಂದದಲ್ಲಿ 59 ದಿನ ಧರಣಿ ಮಾಡಿ, ರಕ್ತದಲ್ಲಿ ಪತ್ರ ಬರೆದು, ನಾವು ಅಧಿಕಾರಕ್ಕೆ ಬಂದರೆ 48 ಗಂಟೆಗಳಲ್ಲಿ ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದರು. ಮುಂದೆ ಅಧಿಕಾರ ಸಿಕ್ಕಾಗ ಯಾಕೆ ಜಾರಿ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಈ ಭಾಗದಲ್ಲಿ ಈ ಯೋಜನೆ ಹೆಸರು ಹೇಳಿಕೊಂಡು ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿ ಈ ಭಾಗದ ರೈತರಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ನಾನು ಈ ಹಿಂದೆ ರೈತ ಸ್ವಾಭಿಮಾನ ಯಾತ್ರೆ ಮಾಡಿ ಮಹದಾಯಿ, ಕೃಷ್ಣೆ, ನವಲೆ ಯೋಜನೆ ಬಗ್ಗೆ 5 ದಿನ 500 ಟ್ರ್ಯಾಕ್ಟರ್‌ ಮೂಲಕ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಈಗಲಾದರು ಬಿಜೆಪಿಯವರು ಮಹದಾಯಿ ಯೋಜನೆ ಬಗ್ಗೆ ಸತ್ಯವನ್ನು ಈ ಭಾಗದ ರೈತರಿಗೆ ತಿಳಿಸಬೇಕು. ಈ ಯೋಜನೆ ಬಗ್ಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತದೆ ಎಂದು ಸುಳ್ಳು ಹೇಳುವುದನ್ನು ನಿಲ್ಲಸಬೇಕು ಎಂದರು.

ಇದು ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಯಾವುದೇ ರೀತಿ ಕಾನೂನು ತೊಡಕುಗಳಿಲ್ಲ. ಆದರೆ ಬಿಜೆಪಿಯವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ಯೋಜನೆಗೆ ಸಂಬಂಧಪಟ್ಟ ದಾಖಲೆಗಳನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಲ್ಲ ಎನ್ನುತ್ತಿದ್ದಾರೆ. ಅವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಪಾಟೀಲ್‌ ಹೇಳಿದರು.

ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿದರು. ಸಚಿವರಾದ ಆರ್.ಬಿ. ತಿಮ್ಮಾಪುರ, ಶಿವಾನಂದ ಪಾಟೀಲ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಬೀಳಗಿ ಶಾಸಕ ಜಿ.ಟಿ. ಪಾಟೀಲ, ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ವಿಜಯಕುಮಾರ ಸರನಾಯ್ಕ, ವಿವೇಕ ಯಾವಗಲ್, ರಕ್ಷಿತಾ ಈಟಿ, ಪ್ರವೀಣ ಯಾವಗಲ್, ಮಲ್ಲಣ್ಣ ಕೋಳೆರಿ, ರಾಜು ಕಲಾಲ ಇದ್ದರು.

Share this article