ಕೊಪ್ಪಳ: ರಾಜ್ಯದಲ್ಲಿ ಜಾತಿವಾರು ಲೆಕ್ಕಾಚಾರ ಪಕ್ಕಾ ಇಲ್ಲ. ಯಾವ ಸಮುದಾಯ ಎಷ್ಟಿದೆ ಎಂಬ ಮಾಹಿತಿ ನಿಖರವಾಗಿಲ್ಲ. ಕಾರಣ ಸರ್ಕಾರದ ಮುಂದಿರುವ ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಾರದೊಳಗೆ ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ರಾಜ್ಯದಲ್ಲಿ ಅನವಶ್ಯಕ ವಿಚಾರ ಚರ್ಚೆ ಆಗುತ್ತಿವೆ. ಅವೆಲ್ಲ ಬಂದ್ ಆಗಬೇಕು. ಕರ್ನಾಟಕ ಸಂಸ್ಕಾರ, ಸಾಮಾಜಿಕ ನ್ಯಾಯ ಇರುವಂತ ಪ್ರದೇಶ. ಬಸವೇಶ್ವರ ನಡೆದಾಡಿದ ನೆಲವಿದು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಚರ್ಚೆ ಮಾಡಿರುವೆ. ಇದರಲ್ಲಿ 2013-18ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರ ರಾಜ್ಯದ ಎಲ್ಲ ಧರ್ಮ, ಜಾತಿಗಳು ಒಳಗೊಂಡ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದವರ ಸಮೀಕ್ಷೆ ಮಾಡಿಸಿದೆ. ಆ ಸಮೀಕ್ಷೆಗೆ ಒಟ್ಟು ₹165 ಕೋಟಿ ಖರ್ಚಾಗಿದೆ. ಅದರಂತೆ ಕಾಂತರಾಜ ಅವರು ರಾಜ್ಯದ ಜನರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದಾರೆ. 2013-18ರ ಅವಧಿಯ ಕೊನೆಯ ಅವಧಿಯಲ್ಲಿ ವರದಿ ಸಿಎಂ ತಲುಪಲಿಲ್ಲ. ಆನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಲೂ ವರದಿ ಬಿಡುಗಡೆ ಮಾಡಲಿಲ್ಲ. ಆನಂತರ ಬಂದ ಬೊಮ್ಮಾಯಿ ಸರ್ಕಾರ ವರದಿ ಬಿಡುಗಡೆ ಮಾಡಲಿಲ್ಲ. ಬಳಿಕ ನಮ್ಮ ಸರ್ಕಾರ ಬಂತು. ಅದರಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕವಾಗಿದ್ದ ಜಯಪ್ರಕಾಶ್ ಹೆಗಡೆ ಅವಧಿ ಹೆಚ್ಚಳ ಮಾಡಿದೆವು. ಅವರು ಸಾಮಾಜಿಕ ಗಣತಿ ವರದಿಯನ್ನು 2024ರ ಫೆ. 29ಕ್ಕೆ ಸರ್ಕಾರಕ್ಕೆ ತಲುಪಿಸಿದ್ದಾರೆ. ಈಗಾಗಲೇ ವರದಿ ಕೊಟ್ಟು ಎಂಟು ತಿಂಗಳಾಗಿದೆ. ಹೀಗಾಗಿ ಜಾರಿ ಮಾಡಿ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಬಗ್ಗೆ ಯೋಚನೆ ಮಾಡುವೆ ಎಂದಿದ್ದಾರೆ. ಬಡವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಳಜಿ ಇದೆ. ಹೀಗಾಗಿ ಮುಂದಿನ ವಾರವೇ ಸಂಪುಟದಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡಲು ನಾನು ಸಿಎಂ ಆರ್ಥಿಕ ಸಲಹೆಗಾರನಾಗಿ ಒತ್ತಾಯ ಮಾಡಿರುವೆ. ಮುಂದಿನ ಬಜೆಟ್‌ನಲ್ಲಿ ಈ ವರದಿ ಅನುಸಾರ ಯೋಜನೆ ರೂಪಿಸಲು ಅನುಕೂಲ ಆಗಲಿದೆ ಎಂದರು.
ಸಿಂಧನೂರಿನ ಕಾರ್ಯಕ್ರಮದಲ್ಲೇ ಸಿಎಂ ವರದಿ ಜಾರಿ ಮಾಡುವುದಾಗಿ ಘೋಷಣೆ ಮಾಡಲು ಒತ್ತಾಯ ಮಾಡುವೆ ಎಂದರು.ರಾಜ್ಯದಲ್ಲಿ ಯಾವ ಜಾತಿಯವರು ಎಷ್ಟಿದ್ದಾರೆ ಎನ್ನುವುದು ಈ ವರೆಗೆ ನಿಖರವಾಗಿ ಗೊತ್ತಿಲ್ಲ. ಈಗ ಶೇ. 50 ಮೀಸಲಾತಿ ಇದೆ. ವರದಿ ಜಾರಿಯಾಗುವುದರಿಂದ ಇದನ್ನು ಶೇ. 75ರ ವರೆಗೂ ಮೀಸಲಾತಿ ಕೊಡಲು ಸಾಧ್ಯವಿದೆ. ಜತೆಗೆ ಸೌಲಭ್ಯ ವಂಚಿತ ಬೇರೆ ಹಿಂದುಳಿದ ವರ್ಗಕ್ಕೆ ಆ ಮೀಸಲಾತಿ ಕೊಡಲು ಅವಕಾಶವಿದೆ. ಅಲ್ಲದೆ, ವರದಿಯಲ್ಲಿ ತಪ್ಪು ಮಾಡಿದ್ದರೆ ಸರಿಪಡಿಸಲು ಅವಕಾಶ ಕೂಡ ದೊರೆಯಲಿದೆ. ಹೀಗಾಗಿ ಜಾತಿ ಗಣತಿ ವರದಿ ಬಿಡುಗಡೆಯಾಗಲಿ ಎಂದು ಒತ್ತಾಯಿಸುತ್ತಿರುವೆ. ಕೇಂದ್ರ ಸರ್ಕಾರವೂ ಜಾತಿ ಗಣತಿ, ಆರ್ಥಿಕ ಗಣತಿ ಮಾಡಲಿ ಎಂದರು.
ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಹಾಗೂ ಶಾಸಕಾಂಗದವರಾದ ನಾವು ಹೇಳಬೇಕು. ಆದರೆ, ಅವರೇ ಸಿಎಂ ಆಗಿ ಮುಂದುವರಿಯಲು ನಾವು ಒತ್ತಾಯಿಸುತ್ತಿದ್ದೇವೆ ಎಂದರು.