ಕೇಂದ್ರ ಅನುದಾನ ವಿಚಾರದಲ್ಲಿ ಸಿಎಂ ಶ್ವೇತಪತ್ರ ಹೊರಡಿಸಲಿ: ಈಶ್ವರಪ್ಪ ಹೇಳಿಕೆ

KannadaprabhaNewsNetwork | Published : Feb 5, 2024 1:48 AM

ಸಾರಾಂಶ

ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಬರಬೇಕಿತ್ತು, ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ. ಎನ್‌ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ. ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸಾಕಷ್ಟು ಅನುದಾನ ಬಂದಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಆದರೆ, ಅವರು ಶ್ವೇತಪತ್ರ ಹೊರಡಿಸುವುದಿಲ್ಲ ಎಂದು ನನಗೆ ಗೊತ್ತು. ಅವರು ಬರೀ ಸುಳ್ಳು ಹೇಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರದಿಂದ ಎಷ್ಟು ಅನುದಾನ ಬರಬೇಕಿತ್ತು, ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ. ಎನ್‌ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಕೆ.ಎಸ್‌. ಈಶ್ವರಪ್ಪ ಸವಾಲು ಎಸೆದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸಾಕಷ್ಟು ಅನುದಾನ ಬಂದಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಆದರೆ, ಅವರು ಶ್ವೇತಪತ್ರ ಹೊರಡಿಸುವುದಿಲ್ಲ ಎಂದು ನನಗೆ ಗೊತ್ತು. ಅವರು ಬರೀ ಸುಳ್ಳು ಹೇಳುತ್ತಾರೆ. ಫೆ.7ರಂದು ಎಲ್ಲರನ್ನೂ ಕರೆದುಕೊಂಡು, ಧರಣಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಒಂದು ವಿರೋಧ ಪಕ್ಷವಾಗಿ ಬದುಕಿದೆ ಎಂದು ತೋರಿಸಲು ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ಕೂರುವ ಮುಂಚೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಪತ್ರ ಹೊರಡಿಸಲಿ ಎಂದು ಹರಿಹಾಯ್ದರು.

ಯುಪಿಎ ಸರ್ಕಾರದ ಅವಧಿಗಿಂತ ನರೇಂದ್ರ ಮೋದಿ ಅವಧಿಯಲ್ಲಿ ಹೆಚ್ಚಿನ ಅನುದಾನ ರಾಜ್ಯಕ್ಕೆ ಬಂದಿದೆ. ಇದು ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ರಾಜಕಾರಣ ಮಾಡುವುದಕ್ಕಾಗಿ ದೆಹಲಿಗೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಡಿ.ಕೆ.ಸುರೇಶ್ ಹೇಳಿಕೆಯಲ್ಲಿ ರಾಜಕೀಯ ಮಾಡಲ್ಲ:

ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದಕ್ಕೆ ಇಡೀ ದೇಶವೇ ಸಂತೋಷಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೆಲವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಬೇಕೆಂದು ಡಿ.ಕೆ.ಸುರೇಶ್ ಹೇಳಿಕೆ ನೀಡಿಲ್ಲ ಎಂದಿದ್ದಾರೆ ಇದನ್ನು ಸ್ವಾಗತ ಮಾಡುತ್ತೇನೆ. ಡಿ.ಕೆ.ಸುರೇಶ್ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಹಣ ನೀಡಬೇಕೆಂದು ಹೇಳಿಕೆ ನೀಡಿದ್ದರು. ಇಡೀ ದೇಶದ ವ್ಯಕ್ತಿ ದೇಶದ ವಿಭಜನೆ ಬಗ್ಗೆ ಹೇಳಿಕೆ ನೀಡಕೂಡದು. ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಅಖಂಡ ಭಾರತ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಲೋಕಸಭೆಯಲ್ಲಿ ಬಜೆಟ್ ಮೇಲಿನ ಅಧಿವೇಶನದಲ್ಲಿ ಸಾಕಷ್ಟು ಪ್ರಶ್ನೆಯನ್ನು ಮಾಡಲಿ ಅದಕ್ಕೆ ಉತ್ತರ ನೀಡಲು ನಿರ್ಮಲಾ ಸೀತಾರಾಮನ್ ಇದ್ದಾರೆ. ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ಒಂದು ರೂಪಾಯಿ ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಕುಡಿಯುವ ನೀರಿಗೆ ಸ್ವಲ್ಪ ಬಂದಿದೆ ಎನ್ನುತ್ತಾರೆ. ಆದರೆ, ಅದು ರೋಟೀನ್ ಆಗಿ ಬರುವ ಅನುದಾನ. ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ ಇಷ್ಟು ಹಣ ಖರ್ಚು ಮಾಡಿದ್ದೇವೆ ಎಂದು ಕೇಂದ್ರವನ್ನು ಕೇಳಬೇಕು. ದೆಹಲಿಯ ಧರಣಿಯ ಮೇಲೆ ರಾಜ್ಯದ ರೈತರಿಗೆ ಬೆಳೆ ಪರಿಹಾರ ಇಷ್ಟಿಷ್ಟು ಬಿಡುಗಡೆ ಮಾಡಿದ್ದೇವೆ ಎಂದು ಕಾಂಗ್ರೆಸ್ ನವರು ಬೋರ್ಡ್ ಹಾಕಲಿ. ಇಲ್ಲದಿದ್ದರೆ ಪುಕ್ಸಟ್ಟೆ ಧರಣಿ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದರು.

- - - -4ಎಸ್‌ಎಂಜಿಕೆಪಿ01: ಕೆ.ಎಸ್.ಈಶ್ವರಪ್ಪ

Share this article