ಕನ್ನಡಪ್ರಭ ವಾರ್ತೆ ತುಮಕೂರು
ಕುಡಿಯುವ ನೀರಿನ ಸಮಸ್ಯೆಯಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಗೊಂದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇನ್ನೆರಡು ದಿನಗಳೊಳಗೆ ಹೊಸ ಕೊಳವೆ ಬಾವಿ ಕೊರೆಸಲು ಕ್ರಮವಿಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೀರ್ತಿ ಕೆ ನಾಯಕ್ ಅವರಿಗೆ ನಿರ್ದೇಶನ ನೀಡಿದರು.
ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರದಲ್ಲಿರುವ ಕೆರೆಗೆ ಹೇಮಾವತಿ ನಾಲೆ ನೀರು ತುಂಬಿಸಿದರೆ ಗೊಂದಿಹಳ್ಳಿ ಗ್ರಾಮಕ್ಕೂ ನೀರು ಪೂರೈಕೆ ಮಾಡಬಹುದಾಗಿದೆ ಎಂಬ ಗ್ರಾಮಸ್ಥರ ಸಲಹೆಯನ್ನು ಆಲಿಸಿದ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು ಎಂದು ಸ್ಥಳದಲ್ಲಿಯೇ ದೂರವಾಣಿ ಮೂಲಕ ಸಂಬಂಧಿಸಿದ ಎಂಜಿನಿಯರ್ ಅನಿಲ್‌ಕುಮಾರ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರಲ್ಲದೆ ಗ್ರಾಮಸ್ಥರ ಮನವಿಯಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿತಂತ್ರಣಾಧಿಕಾರಿಗೆ ಸೂಚನೆ ನೀಡಿದರು.ಇದಕ್ಕೂ ಮುನ್ನ ಬೆಳಿಗಿನ ಜಾವ 6.30 ಗಂಟೆಗೆ ತುಮಕೂರು ತಾಲೂಕು ಊರ್ಡಿಗೆರೆ ಹಾಗೂ ಸೀತಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಯ್ಯನಪಾಳ್ಯ, ಭೋವಿ ಕಾಲೋನಿ, ನಾಗೋಜಿ ಪಾಳ್ಯ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರು ಮೇವಿನ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ದನ-ಕರುಗಳ ಮೇವಿಗೆ ಅನುಕೂಲವಾಗುವಂತೆ ದೊಡ್ಡವಾಡಿ ಬೆಟ್ಟಕ್ಕೆ ಹೋಗಲು ಒತ್ತುವರಿಯಾಗಿರುವ ನಕಾಶೆ ದಾರಿಯನ್ನು ತೆರವು ಮಾಡಿಕೊಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಪಶುಸಂಗೋಪನಾ ಇಲಾಖೆಯಿಂದ ಮೇವಿನ ಕಿಟ್ ಪಡೆದು ಬೆಳೆದಿರುವ ನಾಗೋಜಿಪಾಳ್ಯದ ರೈತ ರಾಜಣ್ಣನ ಮೇವು ತಾಕಿಗೆ ಭೇಟಿ ನೀಡಿ ಮಾಹಿತಿ ಪಡೆದು ರೈತನ ಮನೆಯಲ್ಲಿ ಹಾಲು ಸೇವಿಸಿದ ಜಿಲ್ಲಾಧಿಕಾರಿಗಳು ರಾಜಣ್ಣ ಅವರು 10 ಕುಂಟೆ ಜಮೀನಿನಲ್ಲಿ ತಮ್ಮ ರಾಸುಗಳಿಗಾಗುವಷ್ಟು ಮೇವನ್ನು ಉತ್ಪಾದಿಸಿರುವಂತೆ ಉಳಿದ ರೈತರೂ ಸಹ ತಮ್ಮ ಜಾನುವಾರುಗಳಿಗೆ ಮೇವನ್ನು ಉತ್ಪಾದಿಸಬೇಕು ಎಂದು ಮನವಿ ಮಾಡಿದರು.
ನಂತರ ಕೊರಟಗೆರೆ ತಾಲೂಕು ಇರಕಸಂದ್ರ ಕಾಲೋನಿಯ ರೇಣುಕಾನಗರ, ಇರಕಸಂದ್ರ ಕಾಲೋನಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ನೀರಿಲ್ಲದೆ ತೋಟಗಳು ಒಣಗುತ್ತಿದ್ದು, ತೋಟಗಾರಿಕೆ ಬೆಳೆಗೆ ಬಳಸಿಕೊಳ್ಳಲು ೧೫ ದಿನಗಳಿಗೊಮ್ಮೆ ಕೆರೆಯ ನೀರನ್ನು ಬಿಡಬೇಕೆಂಬ ಸ್ಥಳೀಯರ ಮನವಿಯನ್ನು ಆಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರೈತರ ಅನುಕೂಲಕ್ಕಾಗಿ ಇರಕಸಂದ್ರ ಕಾಲೋನಿ ಕೆರೆ ನೀರನ್ನು ಕಾಲುವೆಗೆ ಬಿಡಲು ಕ್ರಮ ಕೈಗೊಳ್ಳಬೇಕು. ನೀರು ಬಿಡುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿ ಶಿವಪ್ಪ ಅವರಿಗೆ ತಾಕೀತು ಮಾಡಿದರು. ನೀರು ಹರಿಸುವ ಮುನ್ನ ಕಾಲುವೆಯಲ್ಲಿರುವ ಹೂಳನ್ನೆತ್ತಿ, ಗಿಡ-ಗಂಟೆಗಳನ್ನು ಸ್ವಚ್ಛಗೊಳಿಲು ಸಣ್ಣ ನೀರಾವರಿ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಬೇಕೆಂದು ತಹಸೀಲ್ದಾರ್ ಕೆ. ಮಂಜುನಾಥ್ ಅವರಿಗೆ ಸೂಚನೆ ನೀಡಿದರು.