ಸಿಎಂ ಸಿದ್ದರಾಮಯ್ಯ ತಕ್ಷಣವೇ ರಾಜಿನಾಮೆ ನೀಡಿ ರಾಜ್ಯದ ಮರ್ಯಾದೆ ಉಳಿಸಲಿ: ಬ್ರಿಜೇಶ್ ಚೌಟ

KannadaprabhaNewsNetwork |  
Published : Oct 06, 2024, 01:32 AM ISTUpdated : Oct 06, 2024, 12:41 PM IST
ಫೋಟೋ: ೫ಪಿಟಿಆರ್-ಬ್ರಿಜೇಶ್ ಚೌಟಸಂಸದ ಕ್ಯಾ. ಬ್ರಿಜೇಶ್ ಚೌಟ ಮಾದ್ಯಮದೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಲ್ಮೀಕಿ ಹಗರಣ ಮತ್ತು ಮುಡಾ ಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬಳಿಕ ಕೋರ್ಟ್ ಕೂಡ ಇದಕ್ಕೆ ಸಮ್ಮತಿಸಿದೆ. ಎಲ್ಲವನ್ನೂ ಒಪ್ಪಿಕೊಂಡು ಈಗ ಏನೇನೋ ನೆಪ ಹೇಳುತ್ತಿರುವ ಮುಖ್ಯಮಂತ್ರಿಗಳದ್ದು ದಪ್ಪ ಚರ್ಮ ಎಂದು ಟೀಕಿಸಿದರು.

 ಪುತ್ತೂರು : ತನ್ನ ಸುಧೀರ್ಘ ೪೦ ವರ್ಷಗಳ ರಾಜಕೀಯದಲ್ಲಿ ಈ ತನಕ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇದೀಗ ಬಿಳಿ ಎಲ್ಲಿದೆ ಎನ್ನುವುದನ್ನು ಹುಡುಕಬೇಕಾದಷ್ಟು ಕಪ್ಪು ಚುಕ್ಕೆಗಳು ತುಂಬಿಕೊಂಡಿದೆ. ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ನೆಪ ಹೇಳುವ ಬದಲು ತಕ್ಷಣವೇ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ ಕರ್ನಾಟಕದ ಮರ್ಯಾದೆ ಉಳಿಸುವ ಕೆಲಸ ಮಾಡಲಿ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಅವರು ಶನಿವಾರ ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬಳಿಕ ಕೋರ್ಟ್ ಕೂಡ ಇದಕ್ಕೆ ಸಮ್ಮತಿಸಿದೆ. ಎಲ್ಲವನ್ನೂ ಒಪ್ಪಿಕೊಂಡು ಈಗ ಏನೇನೋ ನೆಪ ಹೇಳುತ್ತಿರುವ ಮುಖ್ಯಮಂತ್ರಿಗಳದ್ದು ದಪ್ಪ ಚರ್ಮ ಎಂದು ಟೀಕಿಸಿದರು. 

ವಿದೇಶಿ ಅಡಕೆ ಆಮದು ಬಗ್ಗೆ ಚರ್ಚೆ: ವಿದೇಶದಿಂದ ಅಡಕೆ ಆಮದು ಮಾಡುವುದರಿಂದ ನಮ್ಮ ಅಡಕೆ ಮಾರುಕಟ್ಟೆ ಮೇಲಾಗುವ ಪರಿಣಾಮದ ಬಗ್ಗೆ ಕ್ಯಾಂಪ್ಕೋ ಜತೆ ಸೇರಿಕೊಂಡು ಕೇಂದ್ರದ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು ಎಂದ ಸಂಸದ ಚೌಟ, ಬೆಳೆಗಾರರಿಗೆ ಸಮಸ್ಯೆಯಾಗದಂತೆ ನಾನು ರೈತರ ಜತೆಗಿದ್ದೇನೆ. ಆಮದು ಕಾರಣದಿಂದ ಅಡಕೆ ಧಾರಣೆ ಇಳಿಯಲಿದೆ ಎಂದು ಶಾಸಕ ಅಶೋಕ್ ರೈ ಯಾವ ಮಾನದಂಡದಿಂದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು. ಅಡಕೆಯ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಇದುವರೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಈ ನಿಟ್ಟಿನಲ್ಲಿ ಜಂಟಿ ಅಧ್ಯಯನ ನಡೆಯಬೇಕಿದೆ. ರಾಜ್ಯ ಸರ್ಕಾರ ಸಂತ್ರಸ್ತ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಯೋಚಿಸಬೇಕು ಎಂದು ಆಗ್ರಹಿಸಿದರು.

ಕೊಂಕಣ ರೈಲ್ವೆಯನ್ನು ರೈಲ್ವೆ ಜತೆ ವಿಲೀನಗೊಳಿಸುವ ಚರ್ಚೆ ಆರಂಭಗೊಂಡಿದೆ. ಈ ಪ್ರಕ್ರಿಯೆ ಪೂರ್ಣಗೊಂಡರೆ ಅನೇಕ ಸಮಸ್ಯೆಗಳು ಬಗೆಹರಿಯಲಿವೆ. ಅದೇರೀತಿ ಶಿರಾಡಿ ಘಾಟಿಯಲ್ಲಿರುವ ರೈಲ್ವೆ ಮಾರ್ಗವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಉಸ್ತುವಾರಿ ಸುನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ