ಕಾರವಾರ: ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ಜಿಲ್ಲಾದ್ಯಂತ ಸೆ. 17ರಿಂದ ಆಯೋಜಿಸುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸುವಂತೆ ಜನಾಂದೋಲನದ ರೀತಿಯಲ್ಲಿ ಆಯೋಜಿಸಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅವಧಿಯಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಪ್ರಮುಖ ಧ್ಯೇಯವಾದ ಸ್ವಭಾವ ಸ್ಚಚ್ಛತೆ ಮತ್ತು ಸಂಸ್ಕಾರ. ಸ್ವಚ್ಛತೆ ಮನೋಭಾವ ಪಾಕ್ಷಿಕದ ಅವಧಿಗೆ ಮಾತ್ರ ಸೀಮಿತವಾಗದೇ, ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರೂ ಪ್ರತಿದಿನವೂ ನಿರಂತರವಾಗಿ ಆಚರಿಸಬೇಕು ಹಾಗೂ ಇದನ್ನು ದೈನಂದಿನ ಜೀವನದ ಚಟುವಟಿಕೆಯನ್ನಾಗಿ ಮಾಡಿಕೊಳ್ಳಬೇಕು. ಸ್ವಚ್ಛತೆಯ ಕುರಿತಂತೆ ಪ್ರತಿಯೊಬ್ಬರಲ್ಲೂ ನಾಗರಿಕ ಪ್ರಜ್ಞೆ ಮೂಡುವಂತಾಗಬೇಕು ಎಂದರು.ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ಪ್ರಕೃತಿಯ ಮೇಲೆ ನಡೆಯುತ್ತಿರುವ ಹಾನಿಯನ್ನು ಮತ್ತು ಮಾಲಿನ್ಯದ ಶೋಷಣೆ ತಡೆಯುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಮಾಲಿನ್ಯರಹಿತ ಪರಿಸರವನ್ನು ಕೊಡುಗೆಯನ್ನಾಗಿ ನೀಡುವ ಮಹತ್ತರವಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವ ಕುರಿತಂತೆ ಕಾರ್ಯಕ್ರಮಗಳನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೇ, ಜಿಲ್ಲೆಯ ಎಲ್ಲ ಸ್ವಯಂಸೇವಾ ಸಂಘಟನೆಗಳ ಸಹಕಾರ ಪಡೆದು ವ್ಯಾಪಕ ರೀತಿಯಲ್ಲಿ ಜಾಗೃತಿ ಮೂಡಿಸಿ, ಚಟುವಟಿಕೆಗಳನ್ನು ಕೈಗೊಳ್ಳುವಂತೆ ತಿಳಿಸಿದರು.