ಸಹಕಾರ ರಂಗದಲ್ಲಿ ಯುವಕರನ್ನು ಸೆಳೆಯುವ ಕೆಲಸ ಆಗಬೇಕು. ಯುವಕರು ಸಹಕಾರದ ರಂಗದಲ್ಲಿ ಮಂಚೂಣಿಯಲ್ಲಿರಬೇಕು. ಚುನಾವಣೆಯಲ್ಲಿ ಹಳಬರ ಜತೆಗೆ ಯುವಕರಿಗೂ ಸ್ಥಾನ ನೀಡಬೇಕು.
ಭಟ್ಕಳ:
ಮುರ್ಡೇಶ್ವರದ ಆರ್‌ಎನ್‌ಎಸ್ ಸಭಾಭವನದಲ್ಲಿ ಶನಿವಾರ ನಡೆದ ರಾಜ್ಯ ಸಹಕಾರ ಭಾರತಿ ರಾಜ್ಯ ಕಾರ್ಯಕಾರಿಣಿ ಮತ್ತು ರಾಜ್ಯ ಅಭ್ಯಾಸ ವರ್ಗವನ್ನು ರಾಜ್ಯಾಧ್ಯಕ್ಷ ರಾಜಶೇಕರ ಶೀಲವಂತ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕತೆಗೆ ದೊಡ್ಡ ಪಾಲು ಸಹಕಾರ ರಂಗದ್ದಾಗಿದೆ. ಸಹಕಾರ ರಂಗ ಬದಲಾವಣೆಗೆ ಹೊಂದಿಕೊಂಡು, ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯನಿರ್ಹಹಿಸಬೇಕಾದ ಅಗತ್ಯತೆ ಇದೆ. ಸಹಕಾರ ಭಾರತೀಯ ಸತತ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ರಚಿಸಿದೆ ಎಂದು ಹೇಳಿದರು.ಸಹಕಾರ ರಂಗದಲ್ಲಿ ಯುವಕರನ್ನು ಸೆಳೆಯುವ ಕೆಲಸ ಆಗಬೇಕು. ಯುವಕರು ಸಹಕಾರದ ರಂಗದಲ್ಲಿ ಮಂಚೂಣಿಯಲ್ಲಿರಬೇಕು. ಚುನಾವಣೆಯಲ್ಲಿ ಹಳಬರ ಜತೆಗೆ ಯುವಕರಿಗೂ ಸ್ಥಾನ ನೀಡಬೇಕು. ಆ ಮೂಲಕ ಯುವ ಪೀಳಿಗೆಯನ್ನು ನಮ್ಮೊಟ್ಟಿಗೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಸಹಕಾರ ರಂಗದಲ್ಲಿ ನವೀನತೆ ತರುವ ಕಾರ್ಯ ಆಗಬೇಕು. ಇಲ್ಲಿನ ಸೈಬರ್ ಕ್ರೈಂ ಬಗ್ಗೆಯೂ ನಿಗಾ ವಹಿಸಬೇಕಿದೆ. ಗ್ರಾಹಕರಿಗೆ ತ್ವರಿತ ಆರ್ಥಿಕ ಸೇವೆ ನೀಡುವ ಕೆಲಸ ಆಗಬೇಕೆಂದರು.ಸಹಕಾರ ಭಾರತಿಯ ರಾಷ್ಟ್ರೀಯ ಸಂರಕ್ಷಕ್ ರಮೇಶ ವೈದ್ಯ ಮಾತನಾಡಿ, ಸಹಕಾರ ರಂಗದ ಸಿಬ್ಬಂದಿಗಳ ಶೈಲಿ, ಕಾರ್ಯಕ್ಷಮತೆ, ಜ್ಞಾನ ನೀಡಲು ಸಹಕಾರ ಭಾರತಿ ಆಗಾಗ ಅಭ್ಯಾಸ ವರ್ಗ ಹಮ್ಮಿಕೊಳ್ಳುತ್ತಿದೆ. ಇದರಿಂದ ಸಂಘಟನೆ ಬಲಗೊಳ್ಳಲು ಅನುಕೂಲವಾಗಿದೆ ಎಂದರು.ಸಹಕಾರ ಭಾರತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ್ ಪಾಚ್ ಪೋರ್ ಮಾತನಾಡಿ, ದೇಶದಲ್ಲಿ ಸಹಕಾರ ಭಾರತಿ ಸಹಕಾರ ರಂಗದ ದೊಡ್ಡ ಸಂಘಟನೆಯಾಗಿದೆ. ಸಹಕಾರ ರಂಗ ಉತ್ತಮವಾಗಿ ಕಾರ್ಯನಿರ್ಹಹಿಸಲು ಸಹಕಾರ ಭಾರತಿಯ ಅಭ್ಯಾಸ ವರ್ಗ ಸಹಕಾರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ರಂಗದಿಂದ ಸದುಪಯೋಗಬೇಕು ಎಂದ ಅವರು, ಸಹಕಾರ ರಂಗಗಳು ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷ ಜಿ.ಜಿ. ಶಂಕರ, ಈಶ್ವರನ ಸನ್ನಿಧಿಯಲ್ಲಿ ಸಹಕಾರ ಭಾರತಿಯ ಅಭ್ಯಾಸ ವರ್ಗ ನಡೆಸಿರುವುದು ಖುಷಿ ತಂದಿದೆ. ಸಹಕಾರ ಭಾರತಿ ಸಂಸ್ಕಾರ ಭಾರತಿ ಆಗಿದ್ದು, ಇದರ ಸದುಪಯೋಗವನ್ನು ನಾವೆಲ್ಲರೂ ಪಡೆಯಬೇಕೆಂದರು.ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆನರಾ ಡಿಸಿಸಿ ಬ್ಯಾಂಕಿನು ಉಪಾಧ್ಯಕ್ಷ ಮೋಹನದಾಸ ನಾಯಕ ಸ್ವಾಗತಿಸಿದರು. ಮಾದೇವ ಟಿ ನಾಯ್ಕ, ಜಸಿಕಾ ಫರ್ನಾಂಡಿಸ್ ನಿರೂಪಿಸಿದರು. ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಸಿಇಒ ಮಹೇಶ ಶೆಟ್ಟಿ ವಂದಿಸಿದರು. ಉದ್ಘಾಟನಾ ಪೂರ್ವದಲ್ಲಿ ಗಣಪತಿ ಟಿ. ಹೆಗಡೆ ಇವರ ತಂಡದ ಸಹಕಾರ ಭಾರತಿಯ ಯಕ್ಷಗಾನ ನೃತ್ಯ ಮತ್ತು ಹಾಡು ಮತ್ತು ಜ್ಯೋತಿ ರೋಡ್ರಿಗಸ್ ಅವರ ಸಹಕಾರ ಗೀತೆ ಗಮನ ಸೆಳೆಯಿತು. ಶನಿವಾರ ಬೆಳಗ್ಗೆ ರಾಜ್ಯ ಕಾರ್ಯಕಾರಿಣಿ ಸದಸ್ಯರ ಸಭೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಕಾರ ಭಾರತಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.