ಕನ್ನಡಪ್ರಭ ವಾರ್ತೆ ಹೊಸನಗರ
ಸಹಕಾರ ಕ್ಷೇತ್ರಗಳು ಕೇವಲ ಉಳ್ಳವರ ಪಾಲಾಗದೇ, ಬಡವರು ಮತ್ತು ಸಣ್ಣರೈತರ ಪಾಲಿಗೆ ವರವಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಯಡೂರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲ ವರ್ಗದ ರೈತರು ಸಹಕಾರ ಸಂಘಗಳ ಜೊತೆ ಕೈ ಜೋಡಿಸಬೇಕು. ರೈತರ ನೆರವಾಗುವ ಸಲುವಾಗಿ ಸರ್ಕಾರ ಶೂನ್ಯ ಬಡ್ಡಿದರದ ಸಾಲವನ್ನು ₹5 ಲಕ್ಷಕ್ಕೆ ಏರಿಸಲಿದೆ. ಮಧ್ಯಮ ಸಾಲ ಮನ್ನಾ ಕುರಿತಂತೆ ಸಿಎಂ ಉತ್ಸುಕರಾಗಿದ್ದಾರೆ ಎಂದರು.
ಸಹಕಾರಿ ಸಂಸ್ಥೆಗಳು ಠೇವಣಿ ಸಂಗ್ರಹದ ಬಗ್ಗೆ ಗಮನಹರಿಸಬೇಕು. ಆ ಮೂಲಕ ರೈತರಿಗೆ ಸಿಗಬೇಕಾದ ವಿವಿಧ ಸವಲತ್ತು ನೀಡಲು ಮುಂದಾಗಬೇಕು. ಬಡ್ಡಿರಹಿತ ಸಾಲ ನೀಡುವ ಕಾರಣ ಅದರ ಹೊರೆ ಸರ್ಕಾರಕ್ಕೆ ಬರುತ್ತದೆ. ಇದಕ್ಕೆ ಪೂರಕವಾಗಿ ಸಹಕಾರ ಸಂಸ್ಥೆಗಳು ಸರ್ಕಾರದ ಬೆನ್ನಿಗೆ ನಿಲ್ಲಬೇಕು ಎಂದರು.ಪೊರಕೆ ನೀಡಿದರೆ ಎಚ್ಚರ:
ಶಿಕ್ಷಣ ಅರಸಿ ಬರುವ ಮಕ್ಕಳ ಕೈಗೆ ಪೆನ್ನು, ಪೆನ್ಸಿಲ್ ನೀಡಬೇಕು. ಅದು ಬಿಟ್ಟು ಕಸಪೊರಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಗ್ರಾಪಂಗೆ 1ರಂತೆ ಕೆಪಿಎಸ್ ಶಾಲೆ ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶ ಇರಲಿ, ನಗರ ಪ್ರದೇಶವಿರಲಿ ಶಿಕ್ಷಣದ ಸಕಲ ಸವಲತ್ತು ನೀಡಬೇಕು. ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಸಂಕಷ್ಟದಲ್ಲಿದ್ದ ಹಲವಷ್ಟು ಸಹಕಾರ ಸಂಸ್ಥೆಗಳಿಗೆ ಆರ್ಥಿಕವಾಗಿ ಬಲ ತುಂಬುವ ಮೂಲಕ ಪುನಶ್ಚೇತನಗೊಳಿಸಲಾಗಿದೆ. ನಗರ, ಸೊನಲೆ, ಮೇಗರವಳ್ಳಿ, ಯಡೂರು ಸೇರಿದಂತೆ ನಷ್ಟದಲ್ಲಿದ್ದ ಸಾಕಷ್ಟು ಸಹಕಾರ ಸಂಘಗಳು ಇಂದು ಉತ್ತಮ ವ್ಯವಹಾರ ದಾಖಲಿಸಿದೆ. ರೈತರು ಬೇರೆಡೆ ಸಾಲಕ್ಕಾಗಿ ಕೈ ಚಾಚದೇ ಸಹಕಾರ ಸಂಸ್ಥೆಗಳ ಜೊತೆ ನಿಲ್ಲಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಯಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಾಂಕ ಕೊಳವಾಡಿ, ನಮ್ಮ ಬ್ಯಾಂಕ್ ಹಿಂದೆ ಸಂಕಷ್ಟದಲ್ಲಿತ್ತು. ಆದರೆ, ಡಿಸಿಸಿ ಬ್ಯಾಂಕ್ ಮತ್ತು ಅಂದಿನ ಸಹಕಾರ ಸಚಿವರ ಸಹಕಾರದಿಂದ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ ಎಂದರು.ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಸುಳುಗೋಡು ಗ್ರಾಪಂ ಅಧ್ಯಕ್ಷೆ ಶೃತಿ ಶೇಷಾದ್ರಿ, ಯಡೂರು ಗ್ರಾಪಂ ಅಧ್ಯಕ್ಷ ಡಿ.ಜಯಪ್ರಕಾಶದ, ಖೈರಗುಂದ ಗ್ರಾಪಂ ಅಧ್ಯಕ್ಷ ಕೆ.ಬಿ. ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷ ನಾಗೇಶಗೌಡ, ನಿರ್ದೇಶಕರಾದ ಮಂಜುನಾಥ ಹೊಸಗದ್ದೆ, ಟೀಕಪ್ಪಗೌಡ ಹುಮ್ಮಡಗಲ್ಲು, ಪುರುಷೋತ್ತಮ ಜಗನಕೊಪ್ಪ, ರಮೇಶ ಅಚ್ಚುಮನೆ, ಪ್ರಶಾಂತ ಹಂದಿಗೆಮನೆ, ವಿನೋದ ರಾಜಶೇಖರ ಗಿಣಿಕಲ್ಲು, ಸತ್ತಪ್ರೇಮ, ಸರಸ್ವತಿ ರತ್ನಾಕರ್, ಯಶೋಧ ಚಂದ್ರಶೇಖರ್, ಮಹೇಶ ಮಾಗಲು, ಯಡೂರು ಮಹಮ್ಮದ್ ಶರೀಫ್ ಡಿಸಿಸಿ ಬ್ಯಾಂಕ್ ನ ಶಿವಕುಮಾರ್ ಇದ್ದರು.
- - - -30ಎಸ್‌ಎಂಜಿಕೆಪಿ13:ಹೊಸನಗರದ ತಾಲೂಕಿನ ಯಡೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.