ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಮೀಕ್ಷೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿತ್ತು. ಹಾಗಾಗಿ ದಿನಾಂಕವನ್ನು ವಿಸ್ತರಿಸಲಾಗಿತ್ತು. ಇದೀಗ ಶೇ.90ರಷ್ಟು ಪೂರ್ಣಗೊಂಡಿರುವ ಮಾಹಿತಿ ಇದ್ದು ಇಷ್ಟಕ್ಕೆ ಗಣತಿ ನಿಲ್ಲಿಸಿ ವರದಿ ಸಲ್ಲಿಸುವ ಕಾರ್ಯವಾಗಬೇಕು. ಜು.15ರ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಒಳ ಮೀಸಲು ಜಾರಿಗೊಳಿಸಬೇಕು ಎಂದರು.
ಒಳ ಮೀಸಲು ಜಾರಿ ಸಂಬಂಧ ಸರ್ಕಾರಿ ಉದ್ಯೋಗದ ನೇಮಕಾತಿಗಳಿಗೆ ತಡೆ ನೀಡುವಂತೆ ಸಿಎಂ ಅವರನ್ನು ಕೋರಲಾಗಿತ್ತು. ನಮ್ಮ ಮಾತಿಗೆ ಮನ್ನಣೆ ನೀಡಲಾಗಿದೆ. ಹೊಸದಾಗಿ ಉದ್ಯೋಗ ನೇಮಕಾತಿ ಶುರು ಮಾಡಿದರೆ ವಯೋಮಿತಿ ಮೀರುವವರಿಗೆ ಒಂದು ವರ್ಷ ರಿಯಾಯಿತಿ ನೀಡುವಂತೆ ಕೂಡ ಮನವಿ ಮಾಡಿಕೊಳ್ಳಲಾಗಿದೆ ಎಂದು ಆಂಜನೇಯ ಹೇಳಿದರು.ಸಮೀಕ್ಷಾ ಕಾರ್ಯದ ಅವಧಿಯನ್ನು ಮೂರು ಬಾರಿ ವಿಸ್ತರಣೆ ಮಾಡಲಾಗಿದೆ. ಬಹಳಷ್ಟು ಅವಕಾಶವನ್ನು ನ್ಯಾ.ನಾಗಮೋಹನ್ ದಾಸ್ ಆಯೋಗ ನೀಡಿದೆ. ಆದರೂ ಬೆಂಗಳೂರಂತ ಶಿಕ್ಷಿತರ ಪ್ರದೇಶದಲ್ಲಿ ಶೇ.50 ಆಗಿದ್ದು, ರಾಜ್ಯದ ಉಳಿದ ಪ್ರದೇಶಗಳಲ್ಲಿ ಶೇ.90ರಷ್ಟು ಸಮೀಕ್ಷೆ ಕಾರ್ಯ ಆಗಿದೆ. ಆದ್ದರಿಂದ ವಿಸ್ತರಣೆ ಮಾಡುವುದರಲ್ಲಿ ಅರ್ಥವಿಲ್ಲ. 12 ಸಾವಿರ ಮಂದಿ ಆನ್ಲೈನ್ ಮೂಲಕ ನೋಂದಣಿಗೆ ಪ್ರವೇಶ ಪಡೆದು, ಬಳಿಕ ಹಿಂದೆ ಸರಿದಿದ್ದಾರೆ. ಇವರಿಗೆ ಎಷ್ಟೇ ಸಮಯಾವಕಾಶ ನೀಡಿದರೂ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಆರ್.ನರಸಿಂಹರಾಜು, ಮುಖಂಡರಾದ ಟಿ.ಹನುಮಂತಪ್ಪ, ಮಜಾದ್ ಖಾನ್, ರವಿಚಂದ್ರ, ಬಂಜಗೊಂಡನಹಳ್ಳಿ ಜಯಪ್ಪ, ಶರಣಪ್ಪ, ಮಂಜುನಾಥ್ ಕುಂದವಾಡ ಸುದ್ದಿಗೋಷ್ಠಿಯಲ್ಲಿದ್ದರು.