ದೆಹಲಿ ಪರಿಸ್ಥಿತಿ ನಮಗೆ ಬರದಿರಲಿ

KannadaprabhaNewsNetwork | Published : Nov 19, 2024 12:49 AM

ಸಾರಾಂಶ

ದೆಹಲಿಯಲ್ಲಿ ಮಾಲಿನ್ಯ ಹೆಚ್ಚಿದೆ. ಅಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಮನೆಯಲ್ಲಿಯೇ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.

ಹುಬ್ಬಳ್ಳಿ:

ಪರಿಸರ ಮಾಲಿನ್ಯದಿಂದಾಗಿ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಲಿನ್ಯ ಹೆಚ್ಚಾಗಿ ಆಲ್ಲಿನ ಜನರ ಆರೋಗ್ಯ ಸ್ಥಿತಿ ಹಾಳಾಗುತ್ತಿದೆ. ಇಂತಹ ಸ್ಥಿತಿ ನಮ್ಮ ಭಾಗದಲ್ಲಿ ಬಾರದಿರಲಿ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಗಿಡ-ಮರ ನೆಟ್ಟು ಅವುಗಳ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ. ವಿ.ಎಸ್. ಪಾಟೀಲ ಹೇಳಿದರು.

ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಮೂರು ದಿನಗಳ ವರೆಗೆ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ, ಉದ್ಯಾನ ಸ್ಪರ್ಧೆ ಹಾಗೂ ಸಿರಿ ಧಾನ್ಯ ಹಬ್ಬದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.

ಮರಗಳು ನಮ್ಮ ಶ್ವಾಸಕೋಶ ಇದ್ದಂತೆ. ಎಲ್ಲರೂ ಗಿಡಗಳನ್ನು ನೆಡಬೇಕು. ಇದರ ಜತೆಗೆ ಉದ್ಯಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಇರುವ ಮಾರ್ಗ ಇದೊಂದೆ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಿದೆ. ಅಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಮನೆಯಲ್ಲಿಯೇ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ನಮ್ಮ ಕಡೆ ಬರಬಾರದು. ನಗರೀಕರಣ, ಕೈಗಾರಿಕಾಕರಣ, ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಜಾಗ ಸಿಗುತ್ತಿಲ್ಲ. ಇದರ ಮಧ್ಯೆ ಬಾಲ್ಕನಿ, ಚಾವಣಿ, ಒಳಾಂಗಣ ಉದ್ಯಾನ ಮಾಡಲು ನಮಗೆ ಅವಕಾಶವಿದೆ ಎಂದರು.

ತೋಟಗಾರಿಕಾ ಇಲಾಖೆ ನಿವೃತ್ತ ನಿರ್ದೇಶಕ ಸಿ.ಕೆ. ಹೆರಕಲ್ ಮಾತನಾಡಿ, ದೇವರು ನಮಗೆ ಪ್ರಕೃತಿ ಕೊಟ್ಟಿದ್ದಾನೆ. ಅದನ್ನು ಉಳಿಸಬೇಕು. ಗಿಡಗಳನ್ನು ನೆಡುವುದು, ಬೆಳೆಸುವುದು ದೇವರ ಕೆಲಸ ಎಂದು ಭಾವಿಸಬೇಕು. ರಾಷ್ಟ್ರಸೇವೆ ಎಂದು ಪರಿಗಣಿಸಬೇಕು ಎಂದರು.ಇದಕ್ಕೂ ಮೊದಲು ಮೂರು ದಿನಗಳ ನಡೆದ ಫಲಪುಷ್ಪ ಪ್ರದರ್ಶನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ವಿವಿಧ ವಿಭಾಗದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಡಿ. ಹುದ್ದಾರ, ಮಹಾನಗರ ಪಾಲಿಕೆ ಇಇ ಮಹ್ಮದ್ ಫಿರೋಜ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮಹಾನಗರ ಪಾಲಿಕೆ ತೋಟಗಾರಿಕಾ ವಿಭಾಗದ ನಿವೃತ್ತ ಅಧಿಕಾರಿ ಎ.ಜಿ. ದೇಶಪಾಂಡೆ, ಕೆವಿಜಿ ಬ್ಯಾಂಕ್ ಜಿಎಂ ದಿಲೀಪಕುಮಾರ, ಮುಖ್ಯ ವ್ಯವಸ್ಥಾಪಕ ಉಲ್ಲಾಸ ಗುನಗಾ, ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಮಾಜಿ ನಿರ್ದೇಶಕ ಡಾ. ಕೆ.ಎಫ್. ಕಮ್ಮಾರ ಸೇರಿದಂತೆ ಹಲವರಿದ್ದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಯೋಗೇಶ ಕಿಲಾರಿ ನಿರೂಪಿಸಿದರು.ಕರ್ನಾಟಕ ವಿವಿ ಚಾಂಪಿಯನ್..

ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ, ಉದ್ಯಾನ ಸ್ಪರ್ಧೆ ಹಾಗೂ ಸಿರಿ ಧಾನ್ಯ ಹಬ್ಬದಲ್ಲಿ ವಿವಿಧ ವಿಭಾಗದಲ್ಲಿ ಬಹುಮಾನ ವಿತರಿಸಲಾಯಿತು. ಫಲಪುಷ್ಪ ಪ್ರದರ್ಶನದಲ್ಲಿ ಕವಿವಿ ಜನರಲ್ ಚಾಂಪಿಯನ್, ಮಹಾನಗರ ಪಾಲಿಕೆ ರನ್ನರ್ ಅಪ್‌ಗೆ ತೃಪ್ತಿ ಪಟ್ಟಿತು. ಉದ್ಯಾನಗಳ ಸ್ಪರ್ಧೆಯಲ್ಲಿ ಮಹಾನಗರ ಪಾಲಿಕೆಯು ಜನರಲ್ ಚಾಂಪಿಯನ್ ಆದರೆ ಕವಿವಿ ರನ್ನರ್ ಅಪ್ ಆಗಿ ಹೊರಹೊಮ್ಮಿತು.

Share this article