-ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ । ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಮಹರೋಜ್ ಖಾನ್ ನೇತೃತ್ವದ ಸಭೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಮಹಿಳಾ ಸಬಲೀಕರಣ ಮತ್ತು ಯುವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಇದರ ಲಾಭ ದೊರಕಿಸುವಂತೆ ರಾಜ್ಯ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷರಾದ ಎಸ್.ಆರ್. ಮೆಹರೋಜ್ ಖಾನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರ ಮತ್ತು ಯುವ ಜನಾಂಗದ ಸಬಲೀಕರಣಕ್ಕಾಗಿ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಕರ್ನಾಟಕವಾಗಿದೆ. ಸಾಮಾಜಿಕ ಚಿಂತನೆಯೊಂದಿಗೆ ಈ ಯೋಜನೆ ಸರ್ಕಾರ ರೂಪಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಯಡಿ ಶೇ.100 ರಷ್ಟು ಪ್ರಗತಿ ಸಾಧಿಸಲು ವಿಶೇಷ ಗಮನ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2.96 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, 101.23 ಕೋಟಿ ರು. ಗಳ ಆದಾಯವಾಗಿದೆ. ಅನ್ನಭಾಗ್ಯ ಯೋಜನೆಯ 2.33 ಲಕ್ಷ ಪಡಿತರ ಚೀಟಿಗಳ ಫಲಾನುಭವಿಗಳಿಗೆ 171.05 ಕೋಟಿ ರು. ಗಳ ವೆಚ್ಚ ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.92 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಜೂನ್ ಅಂತ್ಯದವರೆಗೆ ಸಬ್ಸಿಡಿ ಮೂಲಕ ಒಟ್ಟು 76.58 ಕೋಟಿ ರೂಪಾಯಿಗಳನ್ನು ಈ ಯೋಜನೆ ಪಾವತಿಸಲಾಗಿದೆ. ಅದರಂತೆ ಗೃಹಲಕ್ಷ್ಮಿ ಯೋಜನೆಯಡಿ 2.53 ಲಕ್ಷ ಮನೆಯ ಒಡತಿಯರಿಗೆ ತಲಾ 2 ಸಾವಿರ ರು.ಗಳಂತೆ ಡಿಬಿಟಿ ಮೂಲಕ 517.43 ಕೋಟಿ ರು. ಗಳನ್ನು ಪಾವತಿಸಲಾಗಿದೆ. ಯುವನಿಧಿ ಯೋಜನೆಯಡಿ 4840 ಫಲಾನುಭವಿಗಳಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
--- ಬಾಕ್ಸ್ ---
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್.ಆರ್. ಮಹರೋಜ್ ಖಾನ್ ಅವರು, ಈಗಾಗಲೇ ಈ ಯೋಜನೆಯಿಂದ ಹಲವು ಕುಟುಂಬಗಳಿಗೆ ನೆರವಾಗಿದೆ. ಕೌಟುಂಬಿಕ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಔಷಧಿ ನೆರವು ಸೇರಿದಂತೆ ಶಸ್ತ್ರ ಚಿಕಿತ್ಸೆಗೂ ಹಲವು ರೂಪದಲ್ಲಿ ಗೃಹಲಕ್ಷ್ಮಿ, ಯುವನಿಧಿ, ಶಕ್ತಿ ಯೋಜನೆಗಳು ನೆರವು ಆಗಿರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು.
------