ಕನ್ನಡಪ್ರಭ ವಾರ್ತೆ ಹೊಸದುರ್ಗ
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಹಿರಿಯೂರು ತಾಲೂಕಿಗೆ ಸೀಮಿತವಾಗದೆ ತಮ್ಮ ಜವಬ್ದಾರಿ ಅರಿತು ವಿವಿಸಾಗರ ಜಲಾಶಯದ ಹಿನ್ನೀರಿನ ರೈತರ ಸಂಕಷ್ಠಕ್ಕೆ ಪರಿಹಾರ ನೀಡಿಲಿ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಒತ್ತಾಯಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಜಿಲ್ಲಾ ಉಸ್ತುವಾರಿ ಸಚಿವರು ವಿವಿ ಸಾಗರ ಜಲಾಶಯ ತುಂಬಿಸಿದ ಸಂತಸದಲ್ಲಿರಬಹುದು ಆದರೆ ಅವರ ಕಾರ್ಯವ್ಯಾಪ್ತಿ ಇಡೀ ಜಿಲ್ಲೆಗೆ ಇದೆ ಎಂಬುದನ್ನು ಅರಿಯಲಿ. ಅವರು ಜಿಲ್ಲಾ ಉಸ್ತುವಾರಿ ಸಚಿವರಾದಾಗಿನಿಂದ ಒಮ್ಮೆಯೂ ಹೊಸದುರ್ಗ ತಾಲೂಕಿನ ಜನರ ಸಂಕಷ್ಠಕ್ಕೆ ಸ್ಪಂದಿಸಿಲ್ಲ, ಈಗಲಾದರೂ ನಮ್ಮ ಜನರ ಸಂಕಷ್ಠಕ್ಕೆ ಸ್ಪಂದಿಸಲಿ ಎಂದರು.
130 ಅಡಿಗೆ ನೀರು ನಿಲ್ಲಲು ನಮ್ಮ ಅಭ್ಯಂತರವಿಲ್ಲ: ಜಲಾಶಯದಲ್ಲಿ 130 ಅಡಿ ನೀರು ನಿಲ್ಲಲು ನಮ್ಮ ಅಭ್ಯಂತವಿಲ್ಲ ಆದರೆ ಅದನ್ನು ಮೀರಿ ಬರುವ ನೀರನ್ನು ಹೊರ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸಲಿ. ಜಲಾಶಯ ಹಿನ್ನೀರಿನ ಪ್ರದೇಶಕ್ಕೆ ತಜ್ಞರ ತಂಡ ಕಳಿಸಿ ಪರಿಶೀಲನೆ ಮಾಡಿಸಲಿ. ಅಲ್ಲಿನ ಜನರ ಸಮಸ್ಯೆ ಅರಿತು ತಜ್ಞರ ಶಿಫಾರಸ್ಸಿನಂತೆ ಕೆಲಸ ಮಾಡಲಿ ಎಂದ ಶಾಸಕರು ಈ ಭಾರಿ ಕಳೆದ ಭದ್ರಾ ನೀರು ಹರಿದಿದ್ದರಿಂದ ಜಲಾಶಯ ತುಂಬಿದೆ ಆದರೆ ಇದರ ಜೊತೆ ಮಳೆ ನೀರು ಹೆಚ್ಚಾದರೆ ಆ ನೀರನ್ನು ಹೊರ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದರು.
*ಹಿನ್ನಿರಿನ ಜನರಿಗೆ ಸೂಕ್ತ ಪರಿಹಾರ ನೀಡಲಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಮಕುಮಾರ ಅವರು ಬಾಗಿನ ಅರ್ಪಿಸಲು ಜಲಾಶಯಕ್ಕೆ ಬರುತ್ತಿದ್ದಾರೆ. ಅವರು ತಾಲೂಕಿನ ಜಲಾಶಯದ ಹಿನ್ನೀರಿನ ಪಂಚಾಯಿತಿಗಳಾದ ಲಕ್ಕಿಹಳ್ಳಿ, ಅತ್ತಿಮಗ್ಗೆ, ಕಾರೇಹಳ್ಳಿ, ಮತ್ತೋಡು, ಗುಡ್ಡದ ನೇರಲಕೆರೆ ಗ್ರಾಪಂ ಕ್ಷೇತ್ರಗಳಿಗೆ ಭೇಟಿ ನಿಡಿ ಅಲ್ಲಿನ ರೈತರ ಸಂಕಷ್ಠ ಆಲಿಸಬೇಕು. ಕಳೆದ 2 ವರ್ಷಗಳ ಹಿಂದೆ ಜಲಾಶಯ ಕೋಡಿ ಬಿದ್ದಾಗ ಆದ ಅನಾವುತಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಮತ್ತೆ ಅಂತಹುದೇ ಅನಾವುತ ಸಂಭವಿಸುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು ಹಾಗೂ ಅವರಿಗೆ ಸಿಗಬೇಕಾದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ವೇಳೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್, ಕೆಸಿ ನಿಂಗಪ್ಪ ಸೇರಿ ಅನೇಕರಿದ್ದರು.