ಗದಗ: ಹಿರಿಯ ನಾಗರಿಕರು ತಮ್ಮ ಜೀವನದ ಸಂಧ್ಯಾಕಾಲವನ್ನು ಆನಂದ ವೃದ್ಧಾಶ್ರಮದಲ್ಲಿ ಸಂತಸದಿಂದ ನಡೆಸಲಿ ಎಂದು ಜಿಲ್ಲಾ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಹೇಳಿದರು.
ಸಮೀಪದ ಮಲ್ಲಸಮುದ್ರ ಗ್ರಾಮದಲ್ಲಿರುವ ಮಾತೃಪುನರ್ ಮಿಲನ ಸೇವಾ ಸಮಿತಿಯಲ್ಲಿ ಜರುಗಿದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಉಚಿತ ನೇತ್ರ ಹಾಗೂ ಮಂಡಿನೋವು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ವೃದ್ಧಾಶ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳಬಾರದು ಆದರೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಇದೊಂದು ಸಮುದಾಯದ ಅನಿವಾರ್ಯ ಭಾಗವಾಗಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಮಾತೃ ಪುನರ್ ಮಿಲನ ಸೇವಾ ಸಮಿತಿಯು ಆತಂಕದ ಸ್ಥಿತಿಯಲ್ಲಿರುವ ವಯೋವೃದ್ಧರಿಗೆ ಎಲ್ಲ ಅನುಕೂಲಕರ ಸೌಲಭ್ಯ ಒದಗಿಸಿಕೊಟ್ಟು ಪ್ರಶಾಂತವಾದ ವಾತಾವರಣದಲ್ಲಿ ಇರುವಂತೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲರು ಆನಂದಾಶ್ರಮ ಕಟ್ಟಡ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದ ಹಣ ಶಾಸಕರ ನಿಧಿಯಿಂದ ನೀಡಿದ್ದು ಇದು ಅವರು ಹಿರಿಯ ನಾಗರಿಕರ ಬಗೆಗೆ ಕಾಳಜಿ ಮತ್ತು ಕಳಕಳಿಯ ದ್ಯೋತಕವಾಗಿದೆ. ಗಂಗಾಧರ ನಬಾಪೂರ ನೇತೃತ್ವದ ಆನಂದ ವೃದ್ಧಾಶ್ರಮದ ಸಮಿತಿಯ ಸದಸ್ಯರು ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅರವಿಂದ ಪಾಲನಕರ ಮಾತನಾಡಿ, ಆನಂದ ವೃದ್ಧಾಶ್ರಮ ಯಶಸ್ವಿಯಾಗಿ ವೃದ್ಧರ ಸೇವೆ ಸಲ್ಲಿಸಲು ದಾನಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅವರ ಈ ಸೇವಾ ಚಟುವಟಿಕೆಗಳಿಗೆ ತನು-ಮನ-ಧನದಿಂದ ಸಹಾಯ ಸಹಕಾರ ಸಲ್ಲಿಸಬೇಕೆಂದು ಹೇಳಿದರು.
ಈ ವೇಳೆ ಗಣ್ಯ ವ್ಯಾಪಾರಸ್ಥರಾದ ಉಮೇಶ ಹುಬ್ಬಳ್ಳಿ, ಪ್ರಕಾಶ ವರ್ಣೇಕರ್ ಹಾಗೂ ಪ್ರಕಾಶ ವೈಲಾಯಿ ಅವರು, ಆಶ್ರಮದ ಸೇವಾ ಕಾರ್ಯ ಶ್ಲಾಘಿಸಿದರು.ಈ ಸಂದರ್ಭದಲ್ಲಿ ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಹಾಗೂ ತಜ್ಞ ವೈದ್ಯರ ತಂಡವು ಮಲ್ಲಸಮುದ್ರ, ಅಸುಂಡಿ, ಕಳಸಾಪೂರ ಹಾಗೂ ಸುತ್ತಮುತ್ತಲಿ ಗ್ರಾಮಗಳಿಂದ ಆಗಮಿಸದ 100 ಕ್ಕೂ ಹೆಚ್ಚು ಹಿರಿಯ ನಾಗರಿಕರ ನೇತ್ರ ಮತ್ತು ಮಂಡಿ ನೋವು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಸಹಕಾರ ಸಲ್ಲಿಸಿದ 105 ವಸಂತ ಪೂರೈಸಿದ ಶಾಂತಾಬಾಯಿ ಸುಬ್ಬರಾವ್ ವರ್ಣೇಕರ್ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಸುರೇಶ ಲಮಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಸುಂಡಿ ಗ್ರಾಪಂ ಸದಸ್ಯೆ ಶಶಿಕಲಾ ಹೊಸಮನಿ, ಅಲ್ತಾಪ ಕಾಗದಗಾರ, ಮಾಜಿ ನಗರಸಭೆ ಸದಸ್ಯ ಚಾಂದ್ ಕೊಟ್ಟೂರ, ಸುರೇಶ ರೇವಣಕರ್, ಜನಾರ್ಧನ ಹವಳೆ, ಸುಶೀಲಾ ಗಂಗಾಧರ ಕೋಟಿ, ವೈಲಾಯಿ, ಎಂ.ಬಿ.ಹಂಚಿನಾಳ, ರಘುನಾಥಸಾ ಖಟವಟೆ ಹಾಗೂ ಮಾತೃಪುನರ್ ಮಿಲನ ಸೇವಾ ಸಮಿತಿ ಸದಸ್ಯರು ಇದ್ದರು.
ಮೋತಿಲಾಲ ಪೂಜಾರ ಪ್ರಾರ್ಥಿಸಿದರು. ಮಾತೃಪುನರ್ ಮಿಲನ ಸೇವಾ ಸಮಿತಿಯ ಅಧ್ಯಕ್ಷ ಗಂಗಾಧರ ನಭಾಪೂರ ಸ್ವಾಗತಿಸಿದರು. ಪ್ರಾ. ಡಾ.ಬಿ.ಎಸ್. ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ವೆಂಕಟೇಶ ಕುಲಕರ್ಣಿ ವಂದಿಸಿದರು.