- ಗುರು ಸ್ಮರಣಾಭಿವಂದನೆ, ಹಿರಿಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಜಗಳೂರು
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದ ವರ್ಗಗಳಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿ, ಸಮಾಜದ ಮುನ್ನೆಲೆಗೆ ತರುವ ಕಾರ್ಯ ಮಾಡಿದ್ದಾರೆ. ಈ ಸೌಲಭ್ಯವನ್ನು ಶೋಷಿತ ಸಮಾಜದವರು ಸಮರ್ಪಕವಾಗಿ ಬಳಸಿ, ಶಿಕ್ಷಣವಂತರಾಗಬೇಕು ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಶ್ರೀ ಡಾ.ಪ್ರಸನ್ನಾಂದಪುರಿ ಮಹಾಸ್ವಾಮಿ ನುಡಿದರು.ಪಟ್ಟಣದ ಸರ್ಕಾರಿ ಪ್ರಾಥಮಿಕ ಸಂತೆಪೇಟೆ ಶಾಲೆಯ ಆವರಣದಲ್ಲಿ ಭಾನುವಾರ ತಪಸ್ಸು ಟ್ರಸ್ಟ್ ವತಿಯಿಂದ ಗುರು ಸ್ಮರಣಾಭಿವಂದನೆ ಹಾಗೂ ಹಿರಿಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
ಭಾರತಮಾತೆ ತನ್ನ ಮಡಿಲಿನಲ್ಲಿ ಅನೇಕ ಮಹನೀಯರಿಗೆ ಜನ್ಮ ನೀಡಿದ್ದಾಳೆ. ಆ ಮಹಾನಿಯರೆಲ್ಲರ ವಿಚಾರ ಒಂದೇ ಆಗಿತ್ತು, ಅದುವೇ ಸಮಸಮಾಜದ ಭಾರತ. ಹುಟ್ಟು ಸಾವಿನ ಮಧ್ಯದ ಜೀವನ ಜಾತಿ ಕಾರಣಕ್ಕೆ ಶ್ರೇಷ್ಠ ಆಗಬಾರದು, ನೀತಿ ಕಾರಣಕ್ಕೆ ಶ್ರೇಷ್ಠವಾಗಬೇಕು. ಸರ್ಕಾರಗಳು ಶಿಕ್ಷಣ ಕ್ಷೇತ್ರದ ಖಾಸಗೀಕರಣ ತಡೆದು, ಉದಾರೀಕರಣ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿ :
ತಪೋಕ್ಷೇತ್ರ ಕಣವಕುಪ್ಪೆ ಗವಿಮಠ ಶ್ರೀ ನಾಲ್ವಡಿ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಕೇವಲ ಅಂಕಪಟ್ಟಿಗಳ ಮೇಲೆ ಅಳೆಯದೇ, ಅವರಿಗೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಆತ್ಮ ಸ್ಥೈರ್ಯದ ಬದುಕನ್ನು ಕಟ್ಟಿಕೊಕೊಡಬೇಕು. ಅದಕ್ಕೆ ಪೂರಕವಾಗಿ ನೆರವಾಗುವಂಥ ಸಂಸ್ಕಾರದ ಶಿಕ್ಷಣ ನೀಡಬೇಕು ಎಂದರು.ಕೆ.ಪಿ. ಪಾಲಯ್ಯ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಸಂತೆಪೇಟೆ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಜಯಮ್ಮ ಮಾತನಾಡಿದರು. ತಪಸ್ಸು ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ್ ಗುರೂಜಿ ಅವರು ನಿವೃತ್ತಿ ಹೊಂದಿದ, ಹಾಗೂ ಹಿರಿಯ ಶಿಕ್ಷಕರಿಗೆ ಗೌರವಪೂರ್ವಕವಾಗಿ ಸೀರೆ, ಪಂಜೆ ನೀಡುವ ಮೂಲಕ ಗುರು ಸ್ಮರಣಾಭಿವಂದನೆ ಕಾರ್ಯಕ್ರಮದಲ್ಲಿ ನೀಡಲಾಯಿತು.ತಪಸ್ಸು ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ್ ಗುರೂಜಿಯವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಲಾಯಿತು. ಈ ಸಂದರ್ಭ ತಪಸ್ಸು ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ್ ಗುರೂಜಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾರತಿ ಅಕ್ಕ, ಕ.ನಿ.ಪ. ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ತಪಸ್ಸು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ರುದ್ರಮ್ಮ ಹನುಮಂತಪ್ಪ, ಪಪಂ ಸದಸ್ಯ ದೇವರಾಜ್, ಸಿಡಿಎಂಸಿ ಅಧ್ಯಕ್ಷ ಕೀರ್ತಿಕುಮಾರ್, ಸಿಡಿಎಂಸಿ ಸದಸ್ಯ ಆಂಜನೇಯ, ನಾಯಕ ಸಮಾಜ ಮಾಜಿ ತಾಲೂಕು ಅಧ್ಯಕ್ಷ ಲೋಕೇಶ್, ಡಿಎಸ್ಎಸ್ ತಾಲೂಕು ಅಧ್ಯಕ್ಷ ಸತೀಶ್ ಮಲೆಮಾಚಿಕೆರೆ, ರೈತ ಯುವ ಮುಖಂಡ ಕುಮಾರ್, ಜಿಮ್ ತರಬೇತುದಾರ ಜಗದೀಶ್ ಕೆಳಗೋಟೆ, ಹಳೇ ವಿದ್ಯಾರ್ಥಿಗಳಾದ ಅನಂತ್ ರಾಜ್, ಜಗಜೀವನ್ ರಾಮ್, ಗುರುಸ್ವಾಮಿ, ಹನುಮಂತ, ಹರ್ಷ, ಅರುಣಾ, ಮಾರುತಿ, ಅಜೀಂ, ಹುಸೇನ್ ಇತರರು ಇದ್ದರು.
- - --25ಜೆಜಿಎಲ್.4:
ತಪಸ್ಸು ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ್ ಗುರೂಜಿ ಅವರಿಂದ ನಿವೃತ್ತಿ ಹೊಂದಿದ ಹಾಗೂ ಹಿರಿಯ ಶಿಕ್ಷಕರಿಗೆ ಗೌರವಪೂರ್ವಕವಾಗಿ ಸೀರೆ, ಪಂಜೆ ವಿತರಿಸಲಾಯಿತು.