ಹಳಿಯಾಳ: ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು. ರೈತರ ಹಿತರಕ್ಷಣೆ ಮರೆಯಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಕಾರ್ಖಾನೆಯವರ ನಡೆ ರೈತರಲ್ಲಿ ಸಂದೇಹಕ್ಕೆ ಎಡೆ ಮಾಡುವಂತಿರಬಾರದು. ಹಾಗೆಯೇ ಸ್ಥಳೀಯ ಕಾರ್ಖಾನೆಗೆ ಕಬ್ಬು ನೀಡಿ ರೈತರು ಸಹಕರಿಸಬೇಕು. ಪರಸ್ಪರ ಸಮನ್ವಯತೆಯಿಂದ ಹೆಜ್ಜೆಯಿಡಬೇಕು. ಇಬ್ಬರಲ್ಲಿಯೂ ಕೌಟುಂಬಿಕ ವಾತಾವರಣ ನಿರ್ಮಾಣವಾಗಬೇಕು. ಈ ವಿಷಯದಲ್ಲಿ ರಾಜಕೀಯ ಪ್ರವೇಶಿಸಬಾರದು ಎಂದು ಹೇಳಿದರು.
ಹಣ ಪಾವತಿಸುತ್ತಿಲ್ಲ: ಕಬ್ಬು ಬೆಳೆಗಾರರ ಪರವಾಗಿ ಮುಖಂಡರಾದ ನಾಗೇಂದ್ರ ಜಿವೋಜಿ, ಕುಮಾರ ಬೊಬಾಟೆ, ಅಶೋಕ ಮೇಟಿ, ಮಹೇಶ ಬೆಳಗಾಂವಕರ ಮೊದಲಾದವರು ಮಾತನಾಡಿದರು.ಸ್ಥಳೀಯ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಟಕ್ಕೆ ರಾಜ್ಯದಲ್ಲಿಯೇ ಹೆಚ್ಚಿನ ದರ ಆಕರಿಸುತ್ತಾರೆ. ರಾಜ್ಯ ಕಬ್ಬು ಆಯುಕ್ತರು ಪರಿಶೀಲನೆ ನಡೆಸಿ, ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ಆಕರಿಸಿದ ₹236 ಪಾವತಿಸಬೇಕು ಎಂದು ಆದೇಶ ಮಾಡಿದ್ದರು. ಆದರೆ ಕಾರ್ಖಾನೆಯವರು ನ್ಯಾಯಾಲಯದಿಂದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದು, ಅದು ತೆರವಾದರೂ ಹಣ ಪಾವತಿಸುತ್ತಿಲ್ಲ ಎಂದರು.
ಸರ್ಕಾರ ಆದೇಶಿದಂತೆ ರೈತರಿಗೆ ಕಾಣುವಂತೆ ಕಬ್ಬಿನ ತೂಕದ ಯಂತ್ರವನ್ನು ಕಾರ್ಖಾನೆಯ ಹೊರಗಡೆ ಇಡುತ್ತಿಲ್ಲ. ತೂಕದ ಯಂತ್ರಕ್ಕಾಗಿ ಸ್ಥಳ ಪರಿಶೀಲನೆ ಮಾಡಿ ನಿಗದಿಪಡಿಸಿದರೂ ಇಲ್ಲದ ಸಬೂಬು ಹೇಳಿ ದಿನದೂಡುತ್ತಿದ್ದಾರೆ. ಅದರ ಮೇಲಾಗಿ ರೈತರಿಗೆ ತಪ್ಪು ಮಾಹಿತಿ ನೀಡಿ ಕಬ್ಬು ಕಟಾವು ಮಾಡುವ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ಬೇಡಿಕೆ ಇತ್ಯರ್ಥಪಡಿಸದ ಹೊರತು ಕಾರ್ಖಾನೆ ಆರಂಭಿಸಬಾರದು ಎಂದು ಮನವಿ ಮಾಡಿದರು.ಕಾರ್ಖಾನೆಯ ಪರವಾಗಿ ರಮೇಶ ರೆಡ್ಡಿ ಹಾಗೂ ಶಂಕರಲಿಂಗ್ ಅಗಡಿ ಮಾತನಾಡಿದರು.
ಆದೇಶ ಪ್ರಶ್ನಿಸುವುದು ಸರಿಯೇ?: ಕಬ್ಬು ಬೆಳೆಗಾರರ ಅಹವಾಲು ಆಲಿಸಿ ಮಾತನಾಡಿದ ಶಾಸಕರು, ಸರ್ಕಾರ ಯಾವತ್ತೂ ರೈತರ, ಜನರ ಹಿತರಕ್ಷಣೆಯ ದೃಷ್ಟಿಯಲ್ಲಿ ನಿರ್ಧಾರ ಕೈಗೊಂಡು ಆದೇಶ ಹೊರಡಿಸುತ್ತದೆ. ಆದರೆ ಈ ಆದೇಶ ಪ್ರಶ್ನಿಸಿ ಕಾರ್ಖಾನೆಯವರು ನ್ಯಾಯಾಲಯಕ್ಕೆ ಹೋಗಿದ್ದು ಸರಿಯಲ್ಲ. ಕಾರ್ಖಾನೆಯವರು ರೈತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕಿತ್ತು ಎಂದರು.ರೈತರ ಬೇಡಿಕೆಗಳಿಗೆ ಸ್ಪಂದಿಸಿಯೇ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ಶಾಸಕ ದೇಶಪಾಂಡೆ ಸೂಚಿಸಿದರು.
ವಾರದ ಗಡವು: ಮಾತಿನಂತೆ ಕಾರ್ಖಾನೆಯವರು ಯಾವತ್ತೂ ನಡೆಯುವುದಿಲ್ಲ. ಅದಕ್ಕಾಗಿ ಶಾಸಕರು ಕಾರ್ಖಾನೆಯವರಿಗೆ ಬೇಡಿಕೆಗಳನ್ನು ಇತ್ಯರ್ಥಪಡಿಸಲು ತಾಕೀತು ಮಾಡಬೇಕು ಎಂದು ಕಬ್ಬು ಬೆಳೆಗಾರರ ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಶಾಸಕರು, ಕಬ್ಬು ಕಟಾವು ಮತ್ತು ಸಾಗಾಟಕ್ಕೆ ಆಕರಿಸಿದ ಹೆಚ್ಚುವರಿ ಹಣ ಪಾವತಿ, ತೂಕದ ಯಂತ್ರದ ಬೇಡಿಕೆ ಕುರಿತು ಏಳು ದಿನದೊಳಗಾಗಿ ಕಾರ್ಖಾನೆಯವರು ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.ಪೊಲೀಸ್, ಕಂದಾಯ, ಆಹಾರ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು, ಕಬ್ಬು ಬೆಳೆಗಾರರು ಪ್ರಮುಖರು ಇದ್ದರು.