ಹೊಸಪೇಟೆ: ನೀರಾವರಿ ಸಲಹಾ ಸಮಿತಿಯ ನಿರ್ಧಾರದಂತೆ ತುಂಗಭದ್ರಾ ಎಡದಂಡೆಯ ಕಾಲುವೆಯಲ್ಲಿ ಹರಿಸಲಾಗುತ್ತಿರುವ ೩೮೦೦ ಕ್ಯುಸೆಕ್ ನೀರು ಕಾಲುವೆಯ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ಸರಬರಾಜು ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಂಗಭದ್ರಾ ಜಲಾಶಯದ ವೈಕುಂಠ ವಸತಿಗೃಹದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಜ. ೧ರಿಂದ ಎಡದಂಡೆ ಕಾಲುವೆಯಲ್ಲಿ ೩೮೦೦ ಕ್ಯುಸೆಕ್ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಇದರಂತೆ ಕಾಲುವೆಯಲ್ಲಿ ನೀರನ್ನು ಹರಿಯಬಿಡಲಾಗಿದ್ದು, ಎಲ್ಲ ಭಾಗದ ರೈತರಿಗೆ ಈ ನೀರು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಬೆಳೆ ಹಾನಿಯಾಗುವ ಆತಂಕದಿಂದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ನೀರು ದೊರೆಯಲು ಗೇಜ್ ಮೆಂಟೇನ್ ಮಾಡುವುದು ಬಹಳ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ದೂರವಾಣಿ ಮೂಲಕ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರೊಂದಿಗೆ ಮಾತನಾಡಿದ ಸಚಿವ, ಸಮರ್ಪಕ ನೀರು ನಿರ್ವಹಣೆ ನಿಟ್ಟಿನಲ್ಲಿ ರಾಯಚೂರು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡುವಂತೆ ಸೂಚಿಸಿದರು. ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಜಿಲ್ಲೆಗಳ ಮಧ್ಯೆ ಸಮನ್ವಯತೆ ಸಾಧಿಸಬೇಕು. ನೀರು ಎಲ್ಲ ಭಾಗದ ರೈತರಿಗೂ ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮವಹಿಸಬೇಕು. ಮುಂದಿನ ೧೦ ದಿನಗಳು ಬಹಳ ಪ್ರಮುಖವಾಗಿದ್ದು, ಎಲ್ಲ ಭಾಗದ ರೈತರಿಗೂ ಸಮರ್ಪಕ ನೀರು ದೊರೆಯುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಸಚಿವರು ಸೂಚನೆ ನೀಡಿದರು.ಜಾರಕಿಹೊಳಿ ಮನೆಯಲ್ಲಿ ರಾಜಕೀಯ ಚರ್ಚೆಯಾಗಿಲ್ಲ: ಬೋಸರಾಜು
ಹೊಸ ವರ್ಷದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸತೀಶ್ ಜಾರಕಿಹೋಳಿ ಊಟಕ್ಕೆ ಕರೆದಿದ್ದರು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.ಇಲ್ಲಿನ ಟಿಬಿ ಡ್ಯಾಂನಲ್ಲಿ ಶುಕ್ರವಾರ ಕಾಂಗ್ರೆಸ್ ಡಿನ್ನರ್ ಪಾರ್ಟಿ ವಿಚಾರಕ್ಕೆ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸದ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಚರ್ಚೆಯಾಗಿಲ್ಲ. ಹೊರಗಡೆ ಕೇವಲ ಊಹಾಪೋಹಗಳು ಅಷ್ಟೆ. ಸಚಿವ ಸಂಪುಟ ಸಭೆ ಮುಗಿಯುವುದು ತಡವಾಯಿತು. ಹಾಗೆ ಸತೀಶ್ ಜಾರಕಿಹೊಳಿ ಮನೆಗೆ ಊಟಕ್ಕೆ ಹೋಗಿದ್ದರು ಅಷ್ಟೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಎಲ್ಲರನ್ನು ಇಟ್ಟುಕೊಂಡು ನಾವು ಚರ್ಚೆ ಮಾಡಲು ಸಾಧ್ಯವೇ ಹೇಳಿ ನೋಡೋಣ? ಯಾವ ಬಣವೂ ನಮ್ಮಲ್ಲಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಗೆ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ ನೋಡಿದಿರಲ್ಲ. ಸಚಿವ ಸಂಪುಟ ವಿಸ್ತರಣೆ ವಿಚಾರ, ಖಾಲಿ ಇರುವ ಸ್ಥಾನಗಳನ್ನು ತುಂಬಿಕೊಳ್ಳಲಾಗುತ್ತದೆ ಅಷ್ಟೆ. ಕೆಲವರ ಕೊಕ್ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದರು.ಪ್ರತಿ ಎರಡ್ಮೂರು ವರ್ಷಕ್ಕೆ ನಾವು ಬಸ್ ದರ ಏರಿಕೆ ಮಾಡಬೇಕು. ತೈಲ ಬೆಲೆ ಏರಿಕೆಯಾದಂತೆ ಏರಿಕೆ ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರಕ್ಕೂ ಬಸ್ ದರ ಏರಿಕೆಗೂ ಸಂಬಂಧವಿಲ್ಲ. ಸಂಕ್ರಾಂತಿ ಬಳಿಕ ಅವರ ಸಮಸ್ಯೆ ಬಗೆಹರಿಸಲಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಮಾತನಾಡಿದ್ದಾರೆ ಎಂದರು.ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ. ವಿಜಯೇಂದ್ರ ಒಬ್ಬರಿಗೊಬ್ಬರು ಹೋರಾಟ ಮಾಡುತ್ತಿದ್ದಾರೆ. ಅವರಲ್ಲಿ ಮೂರ್ನಾಲ್ಕು ಬಣಗಳಿವೆ. ಬಿಜೆಪಿ ನಾಯಕರ ಮೇಲೆ ಕೇಸ್‌ಗಳಿವೆ, ಅವರ್ಯಾರೂ ರಾಜೀನಾಮೆ ಕೊಡಲಿಲ್ಲ. ಸುಮ್ಮನೆ ಕಾಂಗ್ರೆಸ್ ನಾಯಕರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.