ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೊಣನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಯಗಟಿ ಗ್ರಾಮದ ಸರ್ವೆ ನಂಬರ್ 154 ಮತ್ತು 36ರಲ್ಲಿ 16 ಎಕರೆ ಜಮೀನು ಪಹಣೆಯಲ್ಲಿ ಡೀಮ್ಡ್ ಫಾರೆಸ್ಟ್‌ಗೆ ಸೇರಿರುವ ಸ್ಥಳ ಎಂದು ನಮೂದಾಗಿದ್ದರೂ ಒಟ್ಟು ಐವರಿಗೆ ಸಮನಾಗಿ ತಲಾ 3.20 ಎಕರೆಯಂತೆ ಮಂಜೂರು ಮಾಡಲಾಗಿದೆ. ದಾಖಲೆಯಲ್ಲಿ ಬಗರ್ ಹುಕುಂ ಕಮಿಟಿಯಲ್ಲಿ ಒಪ್ಪಿಗೆ ಪಡೆದು ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಿದ್ದು, ಈ ವಿಷಯವು ಗಮನಕ್ಕೆ ಬಂದು 15 ದಿನಗಳಾದರೂ ಇದುವರೆಗೂ ಜಿಲ್ಲಾಧಿಕಾರಿಯಾಗಲಿ ಅಥವಾ ತಹಸೀಲ್ದಾರ್ ಆಗಲಿ ಕ್ರಮಕ್ಕೆ ಮುಂದಾಗದಿರುವುದು ಅನುಮಾನ ಮೂಡಿಸುವಂತಿದೆ.
ಈ ಹಿಂದೆ ಇದ್ದ ಬಗರ್‌ಹುಕುಂ ಕಮಿಟಿಯಲ್ಲಿ ಆಗದಿರುವ ನಿರ್ಣಯವನ್ನು ಆಗಿದೆ ಎಂದು ದಾಖಲೆ ಸೃಷ್ಟಿಸಲು ದಾಖಲೆಯನ್ನು ತಿದ್ದಿ ಖಾಲಿಯಿರುವ ಜಾಗದಲ್ಲಿ ಹೊಸದಾಗಿ ಹೆಸರುಗಳನ್ನು ಬರೆದು ಜಮೀನನ್ನು 5 ಜನರ ಹೆಸರಿಗೆ ಮಾಡಿಕೊಟ್ಟಿದ್ದು, ಈ ವಿಷಯದಲ್ಲಿ ಎಷ್ಟು ಅವ್ಯವಹಾರ ನಡೆದಿದೆ, ರೈತರ ಬಳಿ ಎಷ್ಟು ಲಂಚ ಪಡೆದಿದ್ದಾರೆ, ಯಾವ್ಯಾವ ಅಧಿಕಾರಿಗಳು ಮತ್ತು ಮದ್ಯವರ್ತಿಗಳು ಶಾಮೀಲಾಗಿದ್ದಾರೆ ಎಂಬುದನ್ನು ತಿಳಿದು ಜಿಲ್ಲಾಧಿಕಾರಿಯವರು ಕ್ರಮಕೈಗೊಳ್ಳಬೇಕಿತ್ತು. ಅಕ್ರಮವಾಗಿ ಮಂಜೂರು ಮಾಡಿರುವ ಜಮೀನನ್ನು ಕೂಡಲೇ ಅರಣ್ಯ ಇಲಾಖೆಯವರು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಕಂದಾಯ ಮಂತ್ರಿಗಳು, ಸರ್ಕಾರ ಅವ್ಯವಹಾರ ಮಾಡಿರುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಪ್ರದೇಶವು ಡೀಮ್ಡ್ ಅರಣ್ಯ ಪ್ರದೇಶವೆಂದು ಮೊದಲೇ ದಾಖಲೆಗಳಿದ್ದು, ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು 12 ಸಾವಿರ ಗಿಡಗಳನ್ನು ನೆಡಲಾಗಿದೆ. ಬಗರ್‌ಹುಕುಂ ಮೂಲಕ ಹಕ್ಕು ಪಡೆದ 5 ಜನರು ಖಾತೆ ಮಾಡಿಸಿಕೊಳ್ಳಲು ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ. ತಹಸೀಲ್ದಾರ್ ಅರಕಲಗೂಡು ಇವರ ಆದೇಶದ ಸಂಖ್ಯೆಯೊಂದಿಗೆ 5 ಜನರಿಗೆ ಮಂಜೂರು ಮಾಡಲಾಗಿದೆ.
ಸದರಿ ಜಮೀನು ಮಂಜೂರಾಗಿರುವ 2023ರಲ್ಲಿ ನಾನೇ ಶಾಸಕನಾಗಿದ್ದು ಆ ಸಮಯದಲ್ಲಿ ದಿನಗಳಲ್ಲಿ ನಾನು ಯಾವುದೇ ಬಗರ್‌ಹುಕುಂ ಸಭೆಯನ್ನು ನಡೆಸಿರುವುದಿಲ್ಲವಾದರೂ ಹಣಮಾಡುವ ಉದ್ದೇಶದಿಂದ ಕಾನೂನನ್ನು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಮಂಜೂರು ಮಾಡದಿರುವುದು ಆಘಾತಕಾರಿ ವಿಷಯವಾಗಿದೆ. ಅಧಿಕಾರಿಗಳು ಯೋಜನೆ ರೂಪಿಸಿ ರೈತರಿಗೆ ಮೋಸಮಾಡುತ್ತಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.