ಅರಣ್ಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಸದ್ಭಳಕೆ ಆಗಲಿ: ಶಾಸಕ ಗವಿಯಪ್ಪ

KannadaprabhaNewsNetwork |  
Published : Jul 25, 2025, 12:32 AM IST
24ಎಚ್‌ಪಿಟಿ2- ಹೊಸಪೇಟೆಯ ರಾಜೀವ್ ನಗರ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಅರಿವು ಕಾರ್ಯಕ್ರಮಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಅವರು ಚಾಲನೆ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮ ಮತ್ತಿತರರಿದ್ದರು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸಪೇಟೆಯಿಂದ ಚಿತ್ರದುರ್ಗದವರೆಗೆ ಅತಿ ಹೆಚ್ಚು ಅರಣ್ಯ ಪ್ರದೇಶ ವ್ಯಾಪಿಸಿದೆ. ಅರಣ್ಯ ಸಂರಕ್ಷಣೆ ಜೊತೆಗೆ ವಿಸ್ತರಣೆಗೆ ಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸಪೇಟೆಯಿಂದ ಚಿತ್ರದುರ್ಗದವರೆಗೆ ಅತಿ ಹೆಚ್ಚು ಅರಣ್ಯ ಪ್ರದೇಶ ವ್ಯಾಪಿಸಿದೆ. ಅರಣ್ಯ ಸಂರಕ್ಷಣೆ ಜೊತೆಗೆ ವಿಸ್ತರಣೆಗೆ ಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.

ನಗರದ ರಾಜೀವ್ ನಗರ ಉದ್ಯಾನದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಪ್ರಾದೇಶಿಕ ವಲಯ ಸಹಯೋಗದಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಅರಿವು ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಅರಣ್ಯ ಅಭಿವೃದ್ಧಿಗೆ ಮೀಸಲಿರುವ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅರಣ್ಯ ಇಲಾಖೆ ಮುಂದಾಗಬೇಕಿದೆ. ಅರಣ್ಯ ಪ್ರದೇಶಗಳಿಗೆ ತುಂಗಭದ್ರಾ ನದಿ ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವತ್ತ ಚಿಂತನೆ ನಡೆಸಬೇಕು. ನದಿಯ ನೀರನ್ನು ಪೈಪ್‌ಲೈನ್ ಮೂಲಕ ಕೆರೆಗಳಿಗೆ ಸಂಗ್ರಹಿಸಿದರೆ ಅಂತರ್ಜಲ ಹೆಚ್ಚಾಗಿ ಬೇಸಿಗೆಯಲ್ಲಿಯೂ ಗಿಡ ಮರಗಳು ಹಸಿರಾಗಲಿವೆ. ಅಂರ್ತಜಲ ವೃದ್ಧಿಯಿಂದ ರೈತಾಪಿ ವರ್ಗಕ್ಕೂ ಅನುಕೂಲವಾಗಲಿದೆ. ಸ್ಥಳೀಯ ವನ್ಯಜೀವಿ ತಾಣಗಳಾದ ದರೋಜಿ ಕರಡಿಧಾಮ ಮತ್ತು ಕಮಲಾಪುರದ ಅಟಲ್‌ಜೀ ಜೂಲಾಜಿಕಲ್ ಪಾರ್ಕ್ ವೀಕ್ಷಣೆಗೆ ಸಾರ್ವಜನಿಕವಾಗಿ ಉತ್ತೇಜನ ನೀಡಬೇಕಿದೆ. ವಿಶೇಷ ಜೀವಿ ಸಂಕುಲ ಹೊಂದಿರುವ ಅರಣ್ಯ ಪ್ರದೇಶಗಳಲ್ಲಿ ಅನೇಕ ಪ್ರಬೇಧದ ಪಕ್ಷಿಗಳು ಹೆಚ್ಚಾಗಿ ಕಾಣುತ್ತಿವೆ. ಗ್ರೇಟ್ ಇಂಡಿಯನ್ ಬಸ್ಟರ್ಡ್ ಅಪರೂಪದ ಪಕ್ಷಿ ಈ ಭಾಗದಲ್ಲಿವೆ ಎಂಬ ಮಾಹಿತಿ ಇದೆ. ವನ್ಯಜೀವಿಗಳು ಮತ್ತು ಪಕ್ಷಿಗಳನ್ನು ಆಕರ್ಷಿಸುವ ಅರಣ್ಯ ಸಂಪತ್ತು ನಮ್ಮಲ್ಲಿ ವೃದ್ಧಿಸಬೇಕಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮ ಮಾತನಾಡಿ, ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ತಾಯಿಯ ಮಮತೆಯಂತೆ ಗಿಡಮರಗಳನ್ನು ಪೋಷಣೆ ಮಾಡುವ ಉದ್ದೇಶವಾಗಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಡುವ ಮೂಲಕ ಕಲುಷಿತ ವಾತಾವರಣದಿಂದ ಮುಕ್ತಗೊಳಿಸಬಹುದಾಗಿದೆ. ಮಳೆಯನ್ನು ಆಕರ್ಷಿಸಲು ಅರಣ್ಯಗಳೇ ಆಧಾರವಾಗಿವೆ. ಹೆಚ್ಚೆಚ್ಚು ಗಿಡಗಳನ್ನು ನೆಡುವ ಮೂಲಕ ಹಸೀರಿಕರಣಕ್ಕೆ ಆದ್ಯತೆ ನೀಡಬೇಕಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಪ್ರಕೃತಿಯ ಉಳಿವಿದೆ ಪರಿಸರ ಸಮತೋಲನ ಮುಖ್ಯವಾಗಿದೆ. ಭೂಮಿಯ ಮೇಲೆ ಪ್ರತಿಯೊಂದ ಜೀವಿಗಳಿಗೂ ಬದುಕುವ ಹಕ್ಕಿದೆ. ಭವಿಷ್ಯದಲ್ಲಿ ಹಸಿರು ವಿಜಯನಗರ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಪ್ರಾಣಿ ಮತ್ತು ಪಕ್ಷಿಗಳ ಬೇಟೆ ಸೇರಿದಂತೆ ಅರಣ್ಯ ದೂರುಗಳಿದ್ದಲ್ಲಿ ಸಹಾಯವಾಣಿ 1926 ಗೆ ಕರೆ ಮಾಡಬಹುದು ಎಂದರು.

ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಮಾತನಾಡಿ, ವನ ಮಹೋತ್ಸವ ಕೇವಲ ಒಂದು ದಿನಕ್ಕೆ ಮಾತ್ರ ಸಿಮೀತವಾಗಿರದೇ ನಿತ್ಯ ನಗರದ ಪ್ರತಿ ವಾರ್ಡ್‌ನಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಣೆಗೆ ಮುಂದಾಗಲಿದ್ದೇವೆ. 35 ವಾರ್ಡ್‌ಗಳಲ್ಲಿ ಪರಿಸರ ಕಾಳಜಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಬ್ಲಾಸಮ್ಸ್ ಕಿಂಡರ್ ಗಾರ್ಡನ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯಗುರು ವಿವೇಕ್, ರಾಜೀವ್ ನಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕಟಗಿ ಗೋಪಾಲ್‌, ಪ್ರಾದೇಶಿಕ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಂತನ್, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಾಲೆಯ ಶಿಕ್ಷಕರು, ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ