ಸಿಎಂ ಸಿದ್ದರಾಮಯ್ಯನವರಿಗೆ ರೈತ ಸೇನಾ ಸಂಘಟನೆ ಅಧ್ಯಕ್ಷ ಸೊಬರದಮಠ ಮನವಿನರಗುಂದ: ರಾಜ್ಯ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠವರು ಬೆಳಗಾವಿ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯನವರನ್ನು ಭೇಟಿ ಮಾಡಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಟೆಂಡರನ್ನು ಕಾನೂನು ಬದ್ಧವಾಗಿ ಕರೆಯಬೇಕೆಂದು ಆಗ್ರಹಿಸಿ ಮನವಿ ನೀಡಿದರು.
ಆನಂತರ ಅವರು ಮಾತನಾಡಿ, ಸರ್ಕಾರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಪ್ರಾರಂಭ ಮಾಡಲು ಪರಿಸರ, ಅರಣ್ಯ ಇಲಾಖೆಯ ಪರವಾನಗಿ ಪಡೆದುಕೊಂಡು ಈ ಕಾಮಗಾರಿಗೆ ಟೆಂಡರ್ ಕರೆಯಬೇಕು. ಈ ಯೋಜನೆ ಕಾಮಗಾರಿಗೆ ಕೇವಲ ಸರ್ಕಾರ ಪರಿಸರ ಮತ್ತು ಅರಣ್ಯ ಇಲಾಖೆಯ ಪರವಾನಗಿ ಪಡೆಯದೆ ಈ ಯೋಜನೆಗೆ ಟೆಂಡರ್ ಕರೆದರೆ ಸಾಲದು ಎಂದರು. ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಕೆಳ ಭಾಗದ ಜಮೀನುಗಳಿಗೆ ನೀರು ಪೂರೈಕೆ ಮಾಡುವ ದೃಷ್ಟಿಯಿಂದ ಬಲದಂಡೆ ಕಾಲುವೆಗಳ ನವೀಕರಣಕ್ಕೆ ರು. 1100 ಕೋಟಿ ಕಾಮಗಾರಿಗೆ ಸರ್ಕಾರ ಹಣ ನೀಡಿದೆ. ಆದರೆ ಈ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣ ಕಳಪೆ ಮಾಡಿದ್ದರಿಂದ ಒಂದು ವರ್ಷದಲ್ಲಿ ಕಾಲುವೆಗೆ ಹಾಕಿರುವ ಕಾಂಕ್ರೀಟ್ ಕಿತ್ತು ಹೋಗಿವೆ. ಮೇಲಾಗಿ ಕಾಲುವೆ ಸುತ್ತಲೂ ರಸ್ತೆಗೆ ಗರಸ ತಂದು ಹಾಕಿ ರೈತರು ಜಮೀನುಗಳಿಗೆ ಹೋಗಲು ವ್ಯವಸ್ಥೆ ಮಾಡಬೇಕು, ಆದರೆ ಗುತ್ತಿಗೆದಾರರು ಈ ಯಾವ ಕೆಲಸಗಳನ್ನು ಮಾಡದೆ ಬಿಲ್ ತೆಗೆದುಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಈ ಗುತ್ತಿಗೆದಾರರು ಮಾಡಿರುವ ಕಾಮಗಾರಿ ತನಿಖೆ ಮಾಡಿಸಿ ಕಾನೂನು ಕ್ರಮ ತಗೆದುಕೊಳ್ಳಬೇಕು. ಇದೇ ರೀತಿ ಬೆಣ್ಣಿ ಹಳ್ಳದ ಸ್ವಚ್ಛತೆಗೆ ಸರ್ಕಾರ ನೂರಾರು ಕೋಟಿ ನೀಡಿದೆ. ಈ ಕಾಮಗಾರಿ ಮಾಡದೆ ಗುತ್ತಿಗೆದಾರರು ಬಿಲ್ ತೆಗೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.