ಬರದಿಂದ ತತ್ತರಿಸಿದ ರೈತರಿಗೆ ಸರ್ಕಾರವೇ ಬಿತ್ತನೆ ಬೀಜ ವಿತರಿಸಲಿ

KannadaprabhaNewsNetwork |  
Published : May 17, 2024, 12:35 AM IST
16ಎಚ್‌ಪಿಟಿ1- ಹೊಸಪೇಟೆಯ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಜೆ.ಎನ್. ಕಾಳಿದಾಸ್ ಅವರು ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. | Kannada Prabha

ಸಾರಾಂಶ

ಸಿಎಂ, ಡಿಸಿಎಂ, ಸಚಿವರು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈಗಾಗಲೇ ರಾಜ್ಯದ ಮಳೆ ಆರಂಭಗೊಂಡಿದೆ.

ಹೊಸಪೇಟೆ: ಕಳೆದ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಬಾರಿ ಮಳೆಗಾಲ ಆರಂಭವಾಗಿದ್ದು, ರೈತರಿಗೆ ಸರ್ಕಾರವೇ ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು. ಜತೆಗೆ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎರಡು ಹಂತಗಳು ಮುಗಿದಿದೆ. ಸಿಎಂ, ಡಿಸಿಎಂ, ಸಚಿವರು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈಗಾಗಲೇ ರಾಜ್ಯದ ಮಳೆ ಆರಂಭಗೊಂಡಿದೆ. ಕೆಲವು ಕಡೆ ಭಾರೀ ಗಾಳಿ ಮಳೆಗೆ ಬತ್ತ, ಬಾಳೆ, ಕಬ್ಬು ಇತರ ಬೆಳೆಗಳಿಗೆ ಹಾನಿಯಾಗಿವೆ. ಈ ಬೆಳೆಗಳಿಗೂ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಜೆ.ಎನ್. ಕಾಳಿದಾಸ್ ಮಾತನಾಡಿ, ಹೊಸಪೇಟೆ ಕಸಬಾ ಹೋಬಳಿ, ಕಮಲಾಪುರ ಹೋಬಳಿ ಭಾಗದಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, ಬತ್ತದ ಬೆಳೆಗಳು ಹಾಳಾಗಿದೆ. ಹೊಸಪೇಟೆ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ತಹಸೀಲ್ದಾರ್ ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬರೀ ವೀಕ್ಷಣೆಗೆ ಸೀಮಿತವಾಗದೇ ರೈತರಿಗೆ ಸಂಪೂರ್ಣ ಬೆಳೆ ಹಾನಿ ದೊರೆಯಬೇಕು. ಜತೆಗೆ ಬಾಳೆ ಬೆಳೆಯುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಒಂದು ಹೆಕ್ಟೇರ್‌ಗೆ ₹80 ಸಾವಿರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಬ್ಯಾಂಕ್ ಖಾತೆ, ಆಧಾರ ಜೋಡಣೆ ಸೇರಿದಂತೆ ಇತರೆ ತಾಂತ್ರಿಕ ಸಮಸ್ಯೆ ಪರಿಹರಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ರಾಗಿ, ಜೋಳ ಖರೀದಿ ಕೇಂದ್ರಗಳ ಮೂಲಕ ಸರ್ಕಾರ ಖರೀದಿಸಿದೆ. ಆದರೆ, ಇದುವರೆಗೂ ರೈತರಿಗೆ ಹಣ ಪಾವತಿ ಮಾಡಿಲ್ಲ. ಕೂಡಲೇ ಈ ಹಣ ಜಮೆ ಮಾಡಬೇಕು. ಮುಂಗಾರಿನಲ್ಲಿ ಬೆಳೆದ ರಾಗಿ, ಜೋಳ, ಸಜ್ಜೆ, ತೊಗರಿಗೂ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 20ರಂದು ಬೆಳಗ್ಗೆ 10 ಗಂಟೆಗೆ ಮಹಾತ್ಮ ಗಾಂಧೀಜಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಚುನಾವಣೆ ಸಮಯದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ ಕೊಟ್ಟ ಮಾತಿನಂತೆ ಸಕ್ಕರೆ ಕಾರ್ಖಾನೆಯನ್ನು ಹೊಸಪೇಟೆ ಭಾಗದಲ್ಲಿ ಆರಂಭಿಸಬೇಕು. ಈ ಕುರಿತು ಕಾರ್ಖಾನೆಗೆ ನಿಗದಿಪಡಿಸಿದ ಜಮೀನಿನ ಸರ್ವೆ ಕಾರ್ಯ ನಡೆಸಬೇಕು. ಜು. ೧೫ರೊಳಗೆ ಕಾರ್ಖಾನೆ ಆರಂಭದ ಪ್ರಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಮುಖಂಡರಾದ ಎಸ್.ಜಿ. ಮಲ್ಲಿಕಾರ್ಜುನ, ಎಲ್.ಎಸ್. ರುದ್ರಪ್ಪ, ಹೇಮರಡ್ಡಿ, ಕೊಟ್ರೇಶಪ್ಪ, ಹನುಮಂತಪ್ಪ, ಜೆ. ನಾಗರಾಜ, ಸಿ.ಎ. ಚನ್ನಪ್ಪ, ಎಂ. ಮಂಜುನಾಥ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!