ಕನ್ನಡಪ್ರಭ ವಾರ್ತೆ ಚಾಮರಾಜನಗರ೨೦೧೫ ರಲ್ಲೇ ₹೧೭೦ ಕೋಟಿ ಖರ್ಚು ಮಾಡಿ ರಾಜ್ಯದ ಮನೆ ಮನೆಗಳಿಗೆ ೧.೬ ಲಕ್ಷ ಸಿಬ್ಬಂದಿಯನ್ನು ಕಳುಹಿಸಿ ಮಾಹಿತಿ ಪಡೆದು ಅದರ ಅಧ್ಯಯನ ನಡೆಸಿ ತಯಾರಿಸಿರುವ ಜಾತಿಗಣತಿ ವರದಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಬ್ರಾಹಾರ್ ಅಹಮದ್ ಒತ್ತಾಯಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ಮೀಸಲಿದ್ದ ೨ಬಿ ಮೀಸಲಾತಿಯನ್ನು ಅಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿ ಅನ್ಯಾಯ ಮಾಡಿತ್ತು. ಮುಸ್ಲಿಂ ಸಮುದಾಯಕ್ಕೆ ಆಗಿರುವ ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ಆಶ್ವಾಸನೆ ಈಡೇರಿಲ್ಲ. ರದ್ದಾಗಿರುವ ೨ಬಿ ಮೀಸಲಾತಿಯನ್ನು ಶೇ. ೮ಕ್ಕೆ ಏರಿಸಿ ಮತ್ತೊಮ್ಮೆ ಮರುಸ್ಥಾಪಿಸಬೇಕು ಎಂದರು.ನಾಳೆ ಬೃಹತ್ ಪ್ರತಿಭಟನೆ:ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ೨೦೨೧ ಮೇ.೨ರಂದು ಸುಮಾರು ೩೬ ಮಂದಿ ಮೃತರಾಗಿ ಈಗಾಗಲೇ ೪ ವರ್ಷಗಳು ಕಳೆದಿವೆ. ಅಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯತೆ ಮತ್ತು ಅಪ್ರಮಾಣಿಕತೆಯಿಂದ ಈ ದುರ್ಘಟನೆ ನಡೆಯಿತು. ಕಾಂಗ್ರೆಸ್ "ಭಾರತ್ ಜೋಡೋ " ಅಭಿಯಾನ ನಡೆಸಿದ ಸಂದರ್ಭದಲ್ಲಿ ಸಂತ್ರಸ್ತರನ್ನು ಕರೆಯಿಸಿ ರಾಹುಲ್ ಗಾಂಧಿ ಜೊತೆ ಸಮಾಲೋಚನಾ ಸಭೆ ಮಾಡಿಸಿದರು. ಸಭೆಯಲ್ಲಿ ಸ್ವತಃ ಸಿದ್ದರಾಮಯ್ಯರವರೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸೂಕ್ತ ನ್ಯಾಯ ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಸಂತ್ರಸ್ತರ ಅಳಲಿಗೆ ಶಾಶ್ವತ ಪರಿಹಾರ ಸಿಗದಿರುವುದು ದುರಂತ ಎಂದರು.
ನಮ್ಮ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಸಂತ್ರಸ್ತರಿಗೆ ಕೇವಲ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಉದ್ಯೋಗ ನೀಡಿ ಕೈತೊಳೆದುಕೊಂಡಿದೆ. ಘಟನೆಗೆ ಕಾರಣಕರ್ತರಾದ ಯಾವೊಬ್ಬ ವೈದ್ಯಾಧಿಕಾರಿಯಾಗಲಿ ಅಥವಾ ಅಂದಿನ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಆಗಿಲ್ಲ. ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಸಂತ್ರಸ್ತ ಕುಟುಂಬಸ್ಥರಲ್ಲಿ ಒಬ್ಬರಿಗೆ ಕಾಯಂ ಸರ್ಕಾರಿ ನೌಕರಿ ನೀಡಬೇಕು ಮತ್ತು ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಈ ಬಗ್ಗೆ ಜಿಲ್ಲಾಡಳಿತದ ಗಮನಸೆಳೆಯಲು ಫೆ.೧೦ ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಮನವಿ ಸಲ್ಲಿಸಲಾಗುವುದು ಎಂದರು. ಜಿಲ್ಲಾಧ್ಯಕ್ಷ ಖಲೀಲ್‌ವುಲ್ಲಾ, ಕಾರ್ಯದರ್ಶಿ ಎಂ. ಮಹೇಶ್, ಹೆಗ್ಗವಾಡಿಪುರ ಮಹೇಶ್‌ಕುಮಾರ್, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಸಂತ್ರಸ್ಧರಾದ ಸವಿತ, ಮರಿಸ್ವಾಮಿ ಇದ್ದರು.